ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಓರ್ವ ವೃದ್ದ ಸಾವಿಗೀಡಾಗಿದ್ದರೆ, 12 ಜನ ವಾಂತಿಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಗಡಿ ಗ್ರಾಮವಾಗಿರುವ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದ್ದು, ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ನಿಂದ ಸರಬರಾಜಾದ ನೀರು ಕುಡಿದ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಲುಷಿತಗೊಂಡಿರುವುದಾಗಿ ಇದೀಗ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿದ ತಕ್ಷಣವೇ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಸ್ವಸ್ಥರಾದವರನ್ನು ಚಿಕಿತ್ಸೆಗಾಗಿ ರವಾನೆ ಮಾಡಲಾಯಿತಾದರು ತೀವ್ರ ಅಸ್ವಸ್ಥಗೊಂಡಿದ್ದ ಗೋವಿಂದೇಗೌಡ (65) ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ 12 ಮಂದಿ ಅಸ್ವಸ್ಥರಾದ ಕಾರಣ ಹೆಚ್ಚಿನ ಚಿಕೆತ್ಸೆಗಾಗಿ ಹಾಸನ ಜಿಲ್ಲೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ತಾಲೂಕು ಆಸ್ಪತ್ರೆಯ ವೈದ್ಯರ ತಂಡ ಬೆಟ್ಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಆರೋಗ್ಯ ತಪಾಸಣೆಯಲ್ಲಿ ತೊಡಗಿದ್ದಾರೆ.