ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಈ ಬಾರಿಯ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ಈ ಹಿನ್ನೆಲೆ ಜಗತ್ಪ್ರಸಿದ್ದ ಮೈಸೂರು ಅರಮನೆ ಆವರಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ. ಈಗಾಗಲೇ ಅಂಬಾವಿಲಾಸ ಅರಮನೆಗೆ ಸುಣ್ಣಬಣ್ಣ ಹೊಡಿಯುವ ಕಾರ್ಯ ಆರಂಭವಾಗಿದ್ದು, ಮೈಸೂರು ಅರಮನೆ ದಸರಾಗೆ ಸಿದ್ದವಾಗ್ತಿದೆ. ಇದರ ನಡುವೆ ಇಂದು ಅರಮನೆಯಲ್ಲಿರುವ ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಜಂಬೂಸವಾರಿ ಮೆರವಣಿಗೆ ದಿನ 21 ಬಾರಿ ಕುಶಾಲತೋಪು ಸಿಡಿಸಲು ಬಳಸುವ ಫಿರಂಗಿ ಗಾಡಿಗಳಿಗೆ ಇಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಸತೀಶ್ ಸೇರಿದಂತೆ ಇನ್ನಿತರ ಪ್ರಮುಖರು ಪೂಜೆ ಸಲ್ಲಿಸಿದರು.
ನಾಳೆಯಿಂದ(ಸೆ.13) ಕುಶಾಲತೋಪು ಸಿಡಿಸುವ ಒಣತಾಲೀಮು (dry practice) ಆರಂಭವಾಗಲಿದೆ. ನಗರ ಸಶಸ್ತ್ರ ಮೀಸಲು ಪಡೆಯ 30 ಕ್ಕೂ ಹೆಚ್ಚು ಸಿಬ್ಬಂದಿಗಳು ಪೂರ್ವ ತಾಲೀಮಿನಲ್ಲಿ ಭಾಗಿಯಾಗಲಿದ್ದು
ಜಂಬೂಸವಾರಿ ಮೆರವಣಿಗೆ ಸಮೀಪಿಸುತ್ತಿದ್ದಂತೆ ಪೂರ್ಣ ಪ್ರಮಾಣದ ತಾಲೀಮು ನಡೆಸಲಿಸಿದ್ದಾರೆ. ದಸರಾ ಗಜಪಡೆ ಹಾಗು ಕುದುರೆಗಳ ಸಮ್ಮುಖದಲ್ಲಿ ಪೂರ್ಣ ಪ್ರಮಾಣದ ತಾಲೀಮು ನಡೆಯಲಿದೆ.
ಜಂಬೂಸವಾರಿ ಮೆರವಣಿಗೆಯ ದಿನ ಚಿನ್ನದ ಅಂಬಾರಿಯಲ್ಲಿ ಪ್ರತಿಪ್ಠಾಪಿಸುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಹಾಗು ಗಣ್ಯರು ಪುಷ್ಪಾರ್ಚನೆ ಮಾಡಿದಾಗ ರಾಷ್ಟ್ರಗೀತೆ ನುಡಿಸಲಾಗುತ್ತದೆ. ರಾಷ್ಟ್ರಗೀತೆ ಮುಗಿಯುವ 52 ಸೆಕೆಂಡ್ ಗಳ ಒಳಗೆ 7 ಫಿರಂಗಿ ಗಾಡಿಗಳ ಮೂಲಕ 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ಕುಶಾಲತೋಪು ಸಿಡಿಸಿದಾಗ ಆನೆ ಕುದುರೆಗಳು ಬೆದರದಿರಲೆಂದು ತಾಲೀಮು ನಡೆಸಲಾಗುತ್ತದೆ. ಇದು ಭಾರೀ ಸವಾಲಿನ ಕೆಲಸವಾಗಿರುವುದರಿಂದ ಆರಂಭದಲ್ಲಿ ಡ್ರೈ ಪ್ರಾಕ್ಟೀಸ್ ನಡೆಸಲಾಗುತ್ತದೆ.