ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ 2 ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಹಲವು ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಈಗಾಗ್ಲೇ ಘಟನೆ ಸಂಬಂಧ 52 ಮಂದಿಯನ್ನ ಬಂಧಿಸಲಾಗಿದೆ. ಬುಧವಾರ ರಾತ್ರಿ ಗಲಭೆ ನಡೆದಿದ್ದು, ಪೊಲೀಸರ ಶತಪ್ರಯತ್ನದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಮಾಧ್ಯಮದವರಿಗೆ ವಿವರಣೆ ನೀಡಿರುವ ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ, ಉದ್ರಿಕ್ತರ ಗುಂಪು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದೆ. ನಮ್ಮ ಇಬ್ಬರು ಸಿಬ್ಬಂದಿಗಳಿಗೆ ಗಾಯಗಳಾಗಿವೆ.ಘಟನೆಯಲ್ಲಿ ಮಚ್ಚು, ಲಾಂಗ್, ಪೆಟ್ರೋಲ್ ಬಾಂಬ್ ಬಳಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಮತ್ತೊಂದೆಡೆ , ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಮಾಧ್ಯಮದವರೊಂದಿಗೆ ಮಾತನಾಡಿ, ಮಸೀದಿ ಮುಂದೆ ಗಣೇಶನ ಮೆರವಣಿಗೆಯನ್ನು ತುಂಬಾ ಸಮಯ ನಿಲ್ಲಿಸಿದ್ದರು ಎಂದು ವಾಗ್ವಾದ ಪ್ರಾರಂಭವಾಗಿದೆ. ಈ ವೇಳೆ ಕೆ ಎಸ್ ಆರ್ ಪಿ ಪೊಲೀಸರ ಭದ್ರತೆ ಇದ್ದರೂ ಕೂಡ ಗಲಭೆ ಪ್ರಾರಂಭವಾಗಿದೆ. ಉದ್ರಿಕ್ತ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಒಂದು ಕೋಮಿನ ಗುಂಪು ಬೈಕ್, ಅಂಗಡಿಗಳಿಗೆ ಬೆಂಕಿ ಹಾಕಿದೆ. ಆದರೆ ಗಲಭೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ.