ಮಂಡ್ಯ: ಕಣ್ಮನ ಸೆಳೆಯುವ ಗಗನಚುಕ್ಕಿಗೆ ಜನರನ್ನು ಸೆಳೆಯಲು ನಿಟ್ಟಿನಲ್ಲಿ ಈ ಬಾರಿ ವಿಜೃಂಭಣೆಯಿಂದ ಜಲಪಾತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 14 ಹಾಗೂ 15 ರಂದು ಆಯೋಜಿಸಲಾಗಿದ್ದು ಸಕಲ ಸಿದ್ದತೆ ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 14 ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಪಾತೋತ್ಸವವನ್ನು ಉದ್ಘಾಟಿಸಲಿದ್ದಾರೆ. ವಿವಿಧ ಭಾಗಗಳಿಂದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್.ಆರ್.ಟಿ.ಸಿ ವತಿಯಿಂದ ವಿಶೇಷ ಬಸ್ ರೂಟ್ ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ರೊಟ್ಟಿಕಟ್ಟೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 14 ಹಾಗೂ 15 ರಂದು ಜಲಪಾತಕ್ಕೆ ವಿಶೇಷ ದೀಪಾಲಂಕಾರ ಹಾಗೂ ಲೇಜರ್ ಶೋ ವ್ಯವಸ್ಥೆ, ಮಾಡಲಾಗಿದೆ.
ಬೆಳದಿಂಗಳ ಕಾರ್ಯಕ್ರಮ ಪ್ರಕೃತಿ ತಾಣವಾದ ಗಗನಚುಕ್ಕಿ ಜಲಪಾತದ ಮುಂಭಾಗ ದೊಡ್ಡದಾದ ಮೆಟ್ಟಿಲು ಹಾಗೂ ಆವರಣ ನಿರ್ಮಾಣವಾಗುತ್ತಿದ್ದು, ಇಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಹಾಗೂ ಶಾಲಾ ಕಾಲೇಜಿನವರು ವಿಶೇಷ ಬೆಳದಿಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶ ನೀಡಲಾಗುವುದುಜಲಪಾತೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗಿದ್ದು, ಸೆ.14 ರಂದು ಬೆಳಿಗ್ಗೆ 11 ಗಂಟೆಗೆ ಸಂಕೇತಿಕವಾಗಿ ಕಲಾತಂಡಗಳ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಎರಡು ದಿನಗಳು ನಡೆಯುವ ಕಾರ್ಯಕ್ರಮದ ವಿವರ
ಸೆಪ್ಟೆಂಬರ್ 14 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 2 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30 ಗಂಟೆವರೆಗೆ ನಾಗೇಶ್ ಕಂದೇಕಾಲ ಮತ್ತು (ಕಲಾವತಿ ದಯಾನಂದ್, ಅಜಯ್ ವಾರಿಯರ್, ಜೋಗಿ ಸುನಿತಾ, ಚಿಂತನ್ ವಿಕಾಸ್, ಸುಹನಾ ಸೈಯದ್) ಇವರಿಂದ ಭಾವಗೀತೆಗಳು.
ಸಂಜೆ 4.30 ರಿಂದ 6 ಗಂಟೆವರೆಗೆ ಪ್ರಖ್ಯಾತ ಕಾಮಿಡಿ ಕಿಲಾಡಿಗಳು ಕಲಾವಿದರಿಂದ ಹಾಸ್ಯ ಮನರಂಜನೆ.
ಸಂಜೆ 7 ಗಂಟೆಯಿಂದ ರಾತ್ರಿ 10.30 ರವರೆಗೆ ಮಣಿಕಾಂತ್ ಕದ್ರಿ, ಚಂದನ್ ಶೆಟ್ಟಿ, ಹಂಸಿಕಾ ಅಯ್ಯರ್ ತಂಡದವರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ.
15 ರಂದು ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು,
ಮಧ್ಯಾಹ್ನ 2 ರಿಂದ ಸಂಜೆ 4.30 ಗಂಟೆವರೆಗೆ ಪ್ರಖ್ಯಾತ ಜಿ-ಸರಿಗಮಪ ತಂಡದವರಿಂದ ಸಂಗೀತ ಕಾರ್ಯಕ್ರಮ.
ಸಂಜೆ 4.30 ರಿಂದ 6 ಗಂಟೆವರೆಗೆ ಪ್ರಖ್ಯಾತ ಕಲರ್ಸ್-ಗಿಚ್ಚಿ ಗಿಲಿಗಿಲಿ ತಂಡದವರಿಂದ ಹಾಸ್ಯ ಕಾರ್ಯಕ್ರಮ.
6 ರಿಂದ ರಾತ್ರಿ 10.30 ಗಂಟೆವರೆಗೆ ರವಿ ಬಸ್ರೂರ್ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿದೆ.