– ಸಿಎಂಗೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ
ಪ್ರತಿನಿಧಿ ವರದಿ ಮೈಸೂರು
ಸ್ಥಳೀಯ ಸಂಸ್ಥೆಗಳ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಹೊಸದಾಗಿ ಲೈಸನ್ಸ್ ಪಡೆದಿರುವ ಯುವ ಗುತ್ತಿಗೆದಾರರಿಗೂ ಅವಕಾಶ ಕಲ್ಪಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.
ರಾಜ್ಯದ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಟೆಂಡರ್ಗಳಲ್ಲಿ ಭಾಗವಹಿಸಿ ಗುತ್ತಿಗೆ ಪಡೆಯಲು ಸಾವಿರಾರು ಯುವಕರು ಪರವಾನಿಗೆ ಪಡೆದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸ್ಥಳೀಯ ಸಂಸ್ಥೆಗಳ ಪ್ರಮುಖರು ಹಾಗೂ ಕೆಲವು ಗುತ್ತಿಗೆದಾರರ ಚಿತಾವಣೆಯಿಂದ ಹೊಸಬರು ಅವಕಾಶ ವಂಚಿತರಾಗಿ, ನಿರುದ್ಯೋಗಿಗಳಾಗಿದ್ದಾರೆ. ಇಂಜಿನಿಯರಿಂಗ್, ಡಿಪ್ಲೋಮಾ ಇನ್ನಿತರೆ ವಿದ್ಯಾರ್ಹತೆ ಇರುವ, ಆಧುನಿಕ ತಂತ್ರಜ್ಞಾನ, ಆವಿಷ್ಕಾರಗಳ ಬಗ್ಗೆ ತಿಳಿದಿರುವ ಯುವಕರಿಗೆ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ತೊಂದರೆ ಎದುರಿಸುವ ಬದಲು ಸ್ವಂತವಾಗಿ ಉದ್ಯೋಗ ಮಾಡಲು ಮುಂದಾಗುತ್ತಿದ್ದಾರೆ. ಇವರಲ್ಲಿ ಅನೇಕರು ಲೋಕೋಪಯೋಗಿ, ನೀರಾವರಿ, ಕಾರ್ಮಿಕ ಇಲಾಖೆ ಮುಂತಾದ ಇಲಾಖೆಗಳಿಂದ ಲೈಸನ್ಸ್ ಪಡೆದು ಕಾಯುತ್ತಿದ್ದಾರೆ. ಆದರೆ ಹೊಸದಾಗಿ ಲೈಸನ್ಸ್ ಪಡೆದವರಿಗೆ ಅವಕಾಶವ ಕಲ್ಪಿಸದೆ, ಹತ್ತಾರು ವರ್ಷಗಳಿಂದ ಇಲಾಖೆ ಕಾಮಗಾರಿ ನಡೆಸಿಕೊಂಡು ಬಂದವರಿಗೆ ಮತ್ತೆ ಮತ್ತೆ ಅವಕಾಶ ನೀಡಲಾಗುತ್ತಿದೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ 10-20 ವರ್ಷಗಳಿಂದ ಯಾರು ಕಾಮಗಾರಿ ನಡೆಸುತ್ತಿದ್ದಾರೋ ಅವರಿಗೆ ಈಗಲೂ ಅವಕಾಶ ನೀಡಲಾಗುತ್ತಿದೆ. ಸರ್ಕಾರ ಯಾವುದೇ ಅಧಿಕೃತ ನಿಯಮಾವಳಿ, ಸೂಚನೆ ಮತ್ತು ಆದೇಶ ಪ್ರಕಟಿಸದಿದ್ದರೂ ಇಲಾಖೆ ಮೇಲಾಧಿಕಾರಿಗಳಿಂದ ಅನಧೀಕೃತವಾಗಿ ತಮಗೆ ಬೇಕಾದಂತೆ ಆದೇಶ ಪಡೆದು, ಅದನ್ನೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹೊಸ ಪರವಾನಿಗೆದಾರರಿಗೆ ತೋರಿಸಿ, ಅವರಗಳನ್ನು ಅನರ್ಹರನ್ನಾಗಿ ಮಾಡುತ್ತಿರುವುದು ಕಂಡು ಬಂದಿದೆ. ಟೆಂಡರ್ ಮೂಲಕ ವಿವಿಧ ಕಾಮಗಾರಿಗಳನ್ನು ಪಡೆಯಬೇಕಾದರೆ, ಸಂಬಂಧಿಸಿದ ಕಾಮಗಾರಿಗಳಲ್ಲಿ ಸೂಕ್ತ ಅನುಭವಬೇಕಿದೆ ಎನ್ನುತ್ತಾರೆ. ಆದರೆ ಸರ್ಕಾರ ಹೊಸಬರಿಗೆ ಕೆಲಸವನ್ನೇ ನೀಡದೆ ಅನುಭವ ಹೊಂದಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಅವರು, ಪ್ರಭಾವಿ ಹಾಗೂ ಹಿರಿಯ ಗುತ್ತಿಗೆದಾರರ ಆಮಿಷದಿಂದ ಇಂತಹ ಅಕ್ರಮ ನಡೆಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಈ ಹಿಂದೆ ತಮ್ಮ ಸರ್ಕಾರದಲ್ಲಿ ಪರಿಶಿಷ್ಟ ಗುತ್ತಿಗೆದಾರರಿಗೆ ಯಾವುದೇ ಇಎಂಡಿ ಇಲ್ಲದೆ ನೇರವಾಗಿ 50 ಲಕ್ಷದ ಕಾಮಗಾರಿ ನೀಡಲು ಆದೇಶ ಹೊರಡಿಸಿ ಹೊಸ ಪದ್ಧತಿಗೆ ನಾಂದಿ ಹಾಡಿದಿರಿ. ಇದರಿಂದ ರಾಜ್ಯದ ಸಹಸ್ರಾರು ಮಂದಿ ಉದ್ಯೋಗ ಪಡೆಯುವಂತಾಯಿತು. ಅದೇ ರೀತಿ ಎಲ್ಲ ವರ್ಗದ ಯುವ ಗುತ್ತಿಗೆದಾರರಿಗೆ ಯಾವುದೇ ಸೇವಾವಧಿ ಮತ್ತು ಅನುಭವದ ನಿಯಮ ವಿಧಿಸದೆ ಟೆಂಡರ್ನಲ್ಲಿ ಭಾಗವಹಿಸುವಂತಹ ಅವಕಾಶ ಕಲ್ಪಿಸಿಕೊಡಬೇಕಿದೆ. ಒಂದು ವೇಳೆ ಇದಕ್ಕೆ ಅವಕಾಶ ನೀಡಿದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಯುವ ಗುತ್ತಿಗೆದಾರರು ಸಂಘಟಿತರಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದಿದ್ದಾರೆ.
=======================