ಮೈಸೂರು: ಗಂಡ ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದ ಪತ್ನಿಯನ್ನು ಪತಿಯೇ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬೇಂಕಿಪುರ ಗ್ರಾಮದಲ್ಲಿ ನಡೆದಿದೆ.
ರೋಜಾ (37) ಮೃತ ಗೃಹಿಣಿ ಎಂದು ತಿಳಿದುಬಂದಿದೆ. ಬೆಂಕಿಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ದಂಪತಿಗಳಿಗೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಸ್ವಾಮಿನಾಯಕ ಮತ್ತು ರೋಜಾ ದಂಪತಿಗಳಿಗೆ ಇಬ್ಬರ ಮಕ್ಕಳಿದ್ದಾರೆ. ಇತ್ತೀಚೆಗೆ ಸ್ವಾಮಿನಾಯಕನ ನಡವಳಿಕೆಯನ್ನು ಪತ್ನಿ ಪ್ರಶ್ನಿಸುತ್ತಿದ್ದರು ಎನ್ನಲಾಗಿದೆ. ಇಬ್ಬರು ಮಕ್ಕಳಿದ್ದರೂ ಪರಸ್ತ್ರೀ ವ್ಯಾಮೋಹ ಹೊಂದಿದ್ದ ಸ್ವಾಮಿನಾಯಕನಿಗೆ ಅದೇ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇತ್ತು. ಪತ್ನಿಯ ಪ್ರಶ್ನೆಗಳಿಗೆ ಕುಪಿತಗೊಂಡ ಪತಿ, ನೀರು ಹಿಡಿಯಲು ಮನೆಯಿಂದ ಹೊರಬಂದ ಪತ್ನಿ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಏಟಿನ ರಭಸಕ್ಕೆ ಪತ್ನಿ ಅಲ್ಲೇ ಕುಸಿದಿದ್ದು, ಸ್ಥಳದಲ್ಲಿಯೇ ಪತ್ನಿ ರೋಜಾ ಸಾವನ್ನಪ್ಪಿದ್ದಾಳೆ.
ಹನ್ನೆರಡು ವರ್ಷಗಳ ದಾಂಪತ್ಯಕ್ಕೆ ಅನೈತಿಕ ಸಂಬಂಧ ಮುಳುವಾಗಿದ್ದು, ಗಂಡ ಹೆಂಡತಿ ಜಗಳದಲ್ಲಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಘಟನೆ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.