ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಮತ್ತು ಸೊಸೆ ಅವಿವ ಬಿದ್ದಪ್ಪ ತಂದೆ-ತಾಯಿ ಆಗುವ ಖುಷಿಯಲ್ಲಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಅಂಬಿ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ. ಇದೇ ಸಂಭ್ರಮದಲ್ಲಿ ಅವಿವಗೆ ಸರಳವಾಗಿ ಸೀಮಂತ ಮಾಡಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅವಿವಗೆ ಸೆ.15ರಂದು ಸೀಮಂತ ಶಾಸ್ತ್ರ ಮಾಡಲಾಯಿತು. ಸೀಮಂತ ಕಾರ್ಯಕ್ರಮದಲ್ಲಿ ಹಸಿರು ಬಣ್ಣದ ಸೀರೆಯುಟ್ಟು ಅಭಿಷೇಕ್ ಪತ್ನಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಅವಿವ ಮುಖದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿದೆ. ಬೆಂಗಳೂರಿನ ಜೆಪಿ ನಗರದಲ್ಲಿ ಸುಮಲತಾ ನಿವಾಸದಲ್ಲಿಯೇ ನಡೆದ ಈ ಸೀಮಂತ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸರಳವಾಗಿ ಜರುಗಿದ ಈ ಸಮಾರಂಭದಲ್ಲಿ ಕುಟುಂಬಸ್ಥರು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಅಂದಹಾಗೆ, ಹಲವು ವರ್ಷಗಳಿಂದ ಅವಿವ ಮತ್ತು ಅಭಿಷೇಕ್ ಪ್ರೀತಿಸುತ್ತಿದ್ದರು. ಕಳೆದ ವರ್ಷ ಜೂನ್ 5ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಅಂಬಿ ಅಭಿಮಾನಿಗಳು ಮತ್ತೊಮ್ಮೆ ರೆಬೆಲ್ ಸ್ಟಾರ್ ಹುಟ್ಟಿ ಬರಲಿ ಅಂತ ಆಶಿಸ್ತಿದ್ದಾರೆ.