ರಾಜ್ಯದ ಹಲವೆಡೆ ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಗಲಾಟೆ ನಡೆಯುತ್ತಿದ್ದರೆ ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆ ಮೆರೆದಿದ್ದಾರೆ.
ಮೈಸೂರಿನ ಸುಣ್ಣದ ಕೇರಿಯಲ್ಲಿನ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದು ಈದ್ ಮಿಲಾದ್ ಅಂಗವಾಗಿ ಮಕ್ಕಳಿಗೆ ಪುಸ್ತಕ ಹಾಗೂ ಹೋಳಿಗೆ ವಿತರಣೆ ಮಾಡಲಾಗಿದ್ದು, ಹಿಂದೂ-ಮುಸ್ಲಿಂ ಸಮುದಾಯದ ಬಾಂಧವರು ಪರಸ್ಪರ ಶುಭ ಕೋರಿ ಮಾನವೀಯತೆ ಮೆರೆದಿದ್ದಾರೆ. ಇದೇ ವೇಳೆ ಗಣೇಶೋತ್ಸವದಲ್ಲಿ ಮುಸ್ಲಿಂ ಬಾಂಧವರು ಭಾಗಿಯಾಗಿ ಸಂಭ್ರಮಿಸಿದ್ದಾರೆ.
ಎರಡು ಸಮುದಾಯದ ಹಬ್ಬವನ್ನು ಸೌಹಾರ್ದಯುತವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆಯುತ್ತಿದೆ.
ಎರಡು ಸಮುದಾಯದವರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ನಾವೆಲ್ಲರೂ ಸೇರಿ ಇಂದು ಒಟ್ಟಾಗಿ ಹಬ್ಬ ಆಚರಣೆ ಮಾಡಿದ್ದೇವೆ. ಇದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಸೌಹಾರ್ದಯುತವಾಗಿ ಹಬ್ಬ ಆಚರಣೆ ಮಾಡಬೇಕು ಎಂದು ಎರಡು ಸಮುದಾಯದ ಮುಖಂಡರು ಕರೆ ನೀಡಿದ್ದಾರೆ.