ಮೈಸೂರು: ಗಣೇಶನನ್ನು ಪೋಲಿಸ್ ವಾಹನದಲ್ಲಿ ಕೂರಿಸಿದ್ದು ಸರಿಯಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಸಾರಾ ಮಹೇಶ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಜ್ಯದಲ್ಲಿ ಗಣೇಶ ಮೂರ್ತಿ ಗಲಾಟೆ ವಿಚಾರವಾಗಿ ಇಂದು ಮೈಸೂರಿನಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಸಾ ರಾ ಮಹೇಶ್ ಪ್ರತಿಕ್ರಿಯಿಸಿದ್ದು, ಗಣೇಶನನ್ನು ಪೋಲಿಸ್ ವಾಹನದಲ್ಲಿ ಕೂರಿಸಿದ್ದು ಸರಿಯಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಪೋಲಿಸ್ ಇಲಾಖೆ ಸರ್ಕಾರದ ಕಪಿಮುಷ್ಟಿಯಲ್ಲಿಲ್ಲ ಬದಲಾಗಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರ ಕಪಿಮುಷ್ಟಿಯಲ್ಲಿದೆ ಎಂದ ಇವರು ರಾಜ್ಯಪಾಲರು ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ದಲಿತರ ಜಾಗದಲ್ಲಿ ಮನೆ ಕಟ್ಟಿ ಮಾರಿದ್ದಾರೆಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ, ಕುಮಾರಸ್ವಾಮಿ ಯಾವುದೇ ದಾಖಲೆ ಇಲ್ಲದೇ ಈ ರೀತಿ ಹೇಳಿಕೆ ಕೊಡುವುದಿಲ್ಲ ಅವರು ರಾಜ್ಯಕ್ಕೆ ಬಂದ ನಂತರ ಈ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ಕಾಂಗ್ರೆಸ್ ಸ್ನೇಹಿತರು ಸಿದ್ದರಾಮಯ್ಯ ಅವರನ್ನು ಯಾವಾಗಲೂ ಸಮರ್ಥಿಸಿಕೊಳ್ಳುತ್ತಾರೆ.ಈ ಹಿಂದೆ ವಾಲ್ಮೀಕಿ ಪ್ರಕರಣದಲ್ಲೂ ಏನೂ ಆಗಿಲ್ಲ ಎನ್ನುತ್ತಿದ್ದರು. ಎಸ್ ಸಿ, ಎಸ್ ಟಿ ಹಣ ದುರ್ಬಳಕೆ ನಾಚಿಕೆ ಗೇಡಿನತನ, ರಾಜ್ಯಕ್ಕೆ ಕಳಂಕ ಎಂದರು. ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಅವರೇ ಇದಕ್ಕೆ ನೇರ ಹೊಣೆಗಾರರು, ಕಾಂಗ್ರೆಸ್ ನವರು ಐದು ಗ್ಯಾರಂಟಿ ಗುಂಗಿನಲ್ಲಿದ್ದಾರೆ.
ಗ್ಯಾರಂಟಿ ಕೊಟ್ಟು ಏನೇ ಭ್ರಷ್ಟಾಚಾರ ಮಾಡಿದರೂ ಜನರು ಕೇಳುವುದಿಲ್ಲ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನ ಲೋಕಸಭಾ ಚುನಾವಣೆಯಲ್ಲಿ ಮತ್ತು ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.