ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ದಿನಗಣನೆ ಪ್ರಾರಂಭವಾಗಿದೆ. ಜಗತ್ಪ್ರಸಿದ್ಧ ಅರಮನೆ ಆವರಣದಲ್ಲಿ ದಸರಾ ಮಹೋತ್ಸವದ ಹಿನ್ನೆಲೆ ಭರದ ಸಿದ್ದತೆ ನಡೆದಿದೆ. ಈಗಾಗಲೇ ಅರಮನೆಗೆ ಸುಣ್ಣಬಣ್ಣ ಹೊಡಿಯಲು ಪ್ರಾರಂಭಿಸಿದ್ದು, ಇನ್ನೇನು ಮುಗಿಯುವ ಹಂತದಲ್ಲಿದೆ. ಅಲ್ಲದೆ ಅರಮನೆಯ ದೀಪಗಳನ್ನು ಬದಲಾಯಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕೆಟ್ಟಿರುವ ಬಲ್ಬ್ ಗಳನ್ನು ಕೂಡ ಬದಲಾಯಿಸಲಾಗಿದೆ. ಇನ್ನು ದಸರೆ ಹಿನ್ನೆಲೆ ಅರಮನೆ ಆವರಣವನ್ನು ಬರೋಬ್ಬರಿ 10 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳಿಂದ ಅಲಂಕರಿಸಲಾಗ್ತಿದೆ.
ಮೈಸೂರಿಗೆ ಬರುವ ಪ್ರವಾಸಿಗರನ್ನು ಕೈಬೀಸಿ ಕರೆಯಲು ಅರಮನೆ ಆವರಣ ಸಿದ್ದಗೊಳ್ತಿದ್ದು, ಪ್ರಸ್ತುತ ದಸರಾ ಕಾರ್ಯಕ್ರಮದಲ್ಲಿ ಅರಮನೆ ಆವರಣದ ಕಛೇರಿ, ಉದ್ಯಾನವನಗಳನ್ನು ಅಲಂಕರಿಸಲು ಮೆರಿಗೋಲ್ಡ್, ಸಾಲ್ಕಿಯ, ಡೇಲಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ಆಂಟಿರೈನಂ, ಬೋನ್ಸಾಯ್ ಗಿಡಗಳು, ಸೇರಿದಂತೆ 32 ಜಾತಿಯ ಹೂವಿನ ಗಿಡಗಳು ಸೇರಿದಂತೆ 10 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಗಿಡಗಳು ಅರಮನೆ ಆವರಣದಲ್ಲಿ ಸಿದ್ಧಗೊಳ್ತಿವೆ. ಅಲ್ಲದೆ ದಸರಾ ಸಂದರ್ಭದಲ್ಲಿ ಒಂದು ಸಾವಿರ ಗುಲಾಬಿ ಗಿಡಗಳು ಅರಮನೆ ಆವರಣದಲ್ಲಿ ನಳನಳಿಸಲಿವೆ.
ಇನ್ನು ಸಿದ್ದತಾ ಕಾರ್ಯಗಳ ಕುರಿತು ಅರಮನೆ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದು, ಅಲಂಕಾರಿಕ ಗಿಡಗಳಿಂದಲೇ ಮೈಸೂರು ದಸರಾಕ್ಕೆ ಸ್ವಾಗತ ಎಂಬ ನಾಮಫಲಕದ ಅಲಂಕಾರ ಮಾಡಲಾಗುವುದು. ಸುಮಾರು 20ಎಕರೆ ಪ್ರದೇಶದ ಉದ್ಯಾನವನಗಳನ್ನು ಹೂವಿನ ಗಿಡಗಳಿಂದ ಅಲಂಕರಿಸಲಾಗುತ್ತಿದೆ. ಸುಮಾರು 1000 ಗುಲಾಬಿ ಗಿಡಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.