ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸಿಂಗಾರಗೊಳ್ಳುತ್ತಿದೆ. ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿದ್ದು, ದಸರೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಇಂದು ಮೈಸೂರು ಜಿಲ್ಲಾಡಳಿತದ ವತಿಯಿಂದ ನಾಡಿನ ಗಣ್ಯರಿಗೆ ದಸರಾ ಮಹೋತ್ಸವದ ಅಧಿಕೃತ ಆಹ್ವಾನ ನೀಡಲಾಗಿದೆ.
ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟಕರಾದ ಹಂ.ಪ.ನಾಗರಾಜಯ್ಯ ಅವರಿಗೆ ಆಹ್ವಾನ ನೀಡಿದ ನಂತರ, ಸಿಎಂ ಸಿದ್ದರಾಮಯ್ಯಗೆ ಆಹ್ವಾನವನ್ನು ನೀಡಲಾಯಿತು. ನಂತರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಎಚ್.ಸಿ. ಮಹದೇವಪ್ಪನವರ ಬೆಂಗಳೂರಿನ ಸ್ವಗೃಹಕ್ಕೆ ತೆರಳಿ ಮೈಸೂರು ದಸರಾಗೆ ಅಧಿಕೃತವಾಗಿ ಆಮಂತ್ರಣ ನೀಡಿದರು.
ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ದಸರಾ ಮಹೋತ್ಸವದ ಅಧಿಕೃತ ಆಹ್ವಾನವನ್ನು ನೀಡಲಾಯಿತು.
ನಂತರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮೈಸೂರು ಜಿಲ್ಲಾಡಳಿತದ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲು ರಾಜಭವನಕ್ಕೆ ತೆರಳಿ ನಾಡಹಬ್ಬಕ್ಕೆ ಆಹ್ವಾನಿಸಲಾಯಿತು.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಜಿಲ್ಲಾಡಳಿತ ವತಿಯಿಂದ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲಾಯಿತು. ಒಟ್ಟಾರೆಯಾಗಿ ದಸರಾ ಸಿದ್ಧತೆಗಳು ಭರದಿಂದ ಸಾಗ್ತಿದ್ದು, ಅದ್ಧೂರಿ ದಸರಾ ಚಾಲನೆಗೆ ಬೆರಳೆಣಿಕೆ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗಣ್ಯರಿಗೆ ಇಂದು ಆಹ್ವಾನ ನೀಡಿದ್ದಾರೆ.
ಈ ವೇಳೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಕೆ.ಎಂ.ಗಾಯಿತ್ರಿ, ಅಪರ ಜಿಲ್ಲಾಧಿಕಾರಿ ಡಾ ಪಿ. ಶಿವರಾಜು ಹಾಗೂ ಸ್ವಾಗತ ಸಮಿತಿಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.