ಮೈಸೂರು: ಇವತ್ತು ಮಾಧ್ಯಮಗಳಿಗೆ ಹೇಳುವುದಕ್ಕೆ ಏನು ಇಲ್ಲ. ನೀವೇ ಏನಾದರೂ ಇದ್ರೇ ಹೇಳಿ, ಕಾನೂನು ಸಲಹೆಗಾರ ಪೊನ್ನಣ್ಣ ಅವರು ತಮ್ಮ ಕ್ಷೇತ್ರಕ್ಕೆ ಹೋಗುತ್ತಿದ್ದರು. ಹೀಗಾಗಿ ಸೌಜನ್ಯವಾಗಿ ನನ್ನನ್ನು ಭೇಟಿಯಾಗಿದ್ದಾರೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಇಂದು ಮೈಸೂರು ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಾನೂನು ಸಲಹೆಗಾರ ಪೊನ್ನಣ್ಣ ಅವರ ಬಳಿ ಯಾವ ಚರ್ಚೆಗಳನ್ನು ಮಾಡಿಲ್ಲ. ಕಾನೂನು ಹೋರಾಟದ ವಿಚಾರವನ್ನು ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ ಎಂದಿದ್ದಾರೆ.
ಇನ್ನು ಕುಮಾರಸ್ವಾಮಿಯ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಬೇಕು ಅಂಥ ಎಲ್ಲಿದೆ ಹೇಳಿ? ಎಂದು ಪ್ರಶ್ನಿಸಿದ್ದಾರೆ. ಅವರ ಆರೋಪಗಳಿಗೆ ಅವರು ಉತ್ತರ ಕೊಡಲ್ಲ ಎಂದ ಮೇಲೆ ನಾನು ಕೊಡುವುದಿಲ್ಲ. ಕುಮಾರಸ್ವಾಮಿಯವರ ಎಲ್ಲ ಹೇಳಿಕೆಗಳು ಸುಳ್ಳಿನಿಂದ ಕೂಡಿದ್ದು, ಅವರ ಎಲ್ಲ ಮಾತಿಗೆ ಪ್ರತಿಕ್ರಿಯೆ ನೀಡುವುದು ಅವಶ್ಯಕತೆಯಿಲ್ಲ ಎಂದರು.
ಪ್ರದಾನಿ ಮೋದಿಯವರು ಹರಿಯಾಣದ ಪ್ರಚಾರ ಭಾಷಣದಲ್ಲಿ ರಾಜ್ಯದ ಮುಡಾ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸುತ್ತಾ, ಬಿಜೆಪಿ ಪಕ್ಷದಲ್ಲಿಯೇ ಬಹಳ ಭ್ರಷ್ಟಾಚಾರಿಗಳಿದ್ದು, ಪ್ರಧಾನಿ ಮೋದಿಯವರು ಅವರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು. ಮೋದಿಯವರು ಮಣಿಪುರದ ಹಿಂಸೆಯ ಬಗ್ಗೆ ಮಾತನಾಡುವುದೂ ಇಲ್ಲ , ಅಲ್ಲಿಗೆ ಭೇಟಿಯೂ ನೀಡಲಿಲ್ಲವೇಕೆ? ಎಂದು ಪ್ರಶ್ನಿಸಿದರು.