ಮೈಸೂರು: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜೀನಾಮೆ ಕೊಡುವುದೇ ಆದರೆ ಎಫ್ಐಆರ್ ದಾಖಲಾಗಿರುವ ಎಲ್ಲಾ ನಾಯಕರು ರಾಜಿನಾಮೆ ಕೊಡಲಿ, ಕುಮಾರಸ್ವಾಮಿಯೂ ಕೊಡಲಿ ಎಂದು ಸ್ವಪಕ್ಷದ ನಾಯಕ ಕುಮಾರಸ್ವಾಮಿಗೆ ಶಾಸಕ ಜಿ ಟಿ ದೇವೇಗೌಡ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಯಾವತ್ತೂ ಕುಟುಂಬ ನೋಡಿದವರಲ್ಲ. ಈಗ ಎಲ್ಲಾ ಗಾಜಿನ ಮನೆಯಲ್ಲಿ ಕೂತಿದ್ದಾರೆ. ಎಫ್ ಐ ಆರ್ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ, ಜೆಡಿಎಸ್ ನಲ್ಲಿ FIR ಆಗಿರೋರು ಇಲ್ವಾ. ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದೆಯಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? ಎಂದು ಎಚ್ ಡಿ ಕುಮಾರಸ್ವಾಮಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ? ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ ಅಂದರೆ ಕೊಡುವುದಕ್ಕೆ ಆಗುತ್ತಾ? ಒಂದು ಅತ್ಯಾಚಾರ, ಕೊಲೆ ಪ್ರಕರಣವನ್ನು ತಿಂಗಳು ಗಟ್ಟಲೆ ಮಾಧ್ಯಮ ತೋರಿಸುತ್ತೇ. ಒಂದು ಎಫ್ ಐ ಆರ್ ನಾ ಎಷ್ಟು ದಿನ ತೋರಿಸುತ್ತೀರಾ? ಯಾರ ಯಾರ ಮೇಲೆ ಎಫ್ ಐ ಆರ್ ಆಗಿದ್ಯೋ ಅವರೆಲ್ಲರೂ ರಾಜೀನಾಮೆ ಕೊಡಿ. ಎಲ್ಲಾ ವಿಧಾನಸೌಧದ ಮುಂದೆ ನಿಂತುಕೊಳ್ಳಿ, ಬನ್ನಿ ನೋಡೋಣ ಎಂದಿರುವ ಜಿಟಿಡಿ, ಕೇಂದ್ರದಿಂದ ರಾಜ್ಯಕ್ಕೆ ಏನು ತರಬೇಕೋ ಅದನ್ನು ನೋಡಿ ಅದನ್ನು ಬಿಟ್ಟು ಬರೀ ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ? ಎಂದು ಎಚ್ ಡಿ ಕೆ ಮೇಲೆ ಜಿ ಟಿ ದೇವೇಗೌಡ ಕಿಡಿಕಾರಿದ್ದಾರೆ.
ದಸರಾ ಉದ್ಘಾಟಕರ ಆಯ್ಕೆಯನ್ನು ಸಿಎಂ ಗೆ ಬಿಟ್ಟು ಕೊಟ್ಟಿದ್ವಿ. ಹಂಪನಾ ಅವರ ಆಯ್ಕೆ ಉತ್ತಮವಾಗಿದೆ ಯಾಕೆಂದರೆ ಇವರು ಯಾವುದೇ ಕಾಂಟ್ರವರ್ಸಿ ಇಲ್ಲದ ಸಾಹಿತಿಗಳು. ಹಂಪನಾ ಅವರಿಗೆ ಚಾಮುಂಡೇಶ್ವರಿ ತಾಯಿ ಆಯಸ್ಸು ಆರೋಗ್ಯ ಕರುಣಿಸಲಿ. ಸಿದ್ದರಾಮಯ್ಯನವರು ಚಾಮುಂಡೇಶ್ವರಿ ತಾಯಿಯ ವರಪುತ್ರರು ಹೌದು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಲಿಟ್ಟ ವೇಳೆಯಿಂದಲೂ ಸಿದ್ದರಾಮಯ್ಯ ಸಚಿವರಾಗಿ, ಡಿಸಿಎಂ ಆಗಿ, ಎರಡು ಬಾರಿ ಸಿಎಂ ಆಗಿದ್ದಾರೆ, ಎಂದರೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇದಕ್ಕೆ ಕಾರಣ. ಎಂತಹ ಸಂದರ್ಭದಲ್ಲಿಯೂ ತಾಯಿ ಚಾಮುಂಡೇಶ್ವರಿ ಅವರ ಪಾಲಿಗೆ ಇದ್ದಾರೆ. ಉಪ ಚುನಾವಣೆ ವೇಳೆ ಸಿದ್ದರಾಮಯ್ಯರನ್ನು ಸೋಲಿಸಲಿಕ್ಕೆ ನಾವು ತೀರ್ಮಾನ ಮಾಡಿದ್ವಿ ಆದರೆ ಸಿದ್ದರಾಮಯ್ಯ ಆ ಚುನಾವಣೆಯಲ್ಲಿ ಗೆದ್ದರು. ಇದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಅವರಿಗೆ ಇದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಡಿಸಿಎಂ ಡಿ ಕೆ ಶಿವಕುಮಾರ್ ಕೂಡ ಕಾರಣ. ಸಚಿವ ಮಹದೇವಪ್ಪ ಎಲ್ಲಾ ಸಚಿವ ಸ್ಥಾನವನ್ನು ಪಡೆದಿದ್ದಾರೆ. ಒಬ್ಬ ದಲಿತ ನಾಯಕನನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಸಿಎಂ, ಡಿಸಿಎಂ, ಸಚಿವ ಮಹದೇವಪ್ಪರನ್ನು ಶಾಸಕ ಜಿ ಟಿ ದೇವೇಗೌಡ ಹಾಡಿ ಹೊಗಳಿದ್ದಾರೆ.
ಇನ್ನು ಜಿ ಟಿ ದೇವೇಗೌಡ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸಚಿವರು, ಶಾಸಕರು ಫಿದಾ ಆಗಿದ್ದಾರೆ. ಭಾಷಣ ಮುಗಿಸಿ ಬಂದ ಜಿಟಿಡಿಗೆ ಜನಪ್ರತಿನಿಧಿಗಳು ಎದ್ದು ನಿಂತು ಗೌರವ ಸಲ್ಲಿಸಿದ್ದು, ಶಾಸಕರಾದ ರಮೇಶ್ ಬಂಡೀಸಿದ್ದೇಗೌಡ, ತನ್ವೀರ್ ಸೇಠ್ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಹಾಗೂ ಸಚಿವ ಹೆಚ್ ಕೆ ಪಾಟೀಲ್, ವೆಂಕಟೇಶ್ ಹಸ್ತಲಾಘವ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.