ಮೈಸೂರು: “ಬಹುಭಾಗ್ಯಗಳ ಬ್ರಹ್ಮ” ಎಂಬ ಕೀರ್ತಿ ಗಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ, ಜನಾನುರಾಗಿ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೆ, ಮೈಸೂರಿನ ಭವ್ಯ ಪರಂಪರೆಯನ್ನು ಇನ್ನೂ ಭದ್ರತರವಾಗಿಸಲು ಟೊಂಕ ಕಟ್ಟಿ ನಿಂತಿರುವ ಶ್ರೀ ಹೆಚ್.ಸಿ. ಮಹದೇವಪ್ಪನವರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನವಚೈತನ್ಯ ನೀಡುತ್ತಿರುವ ಶ್ರೀ ಶಿವರಾಜ ತಂಗಡಗಿ ಅವರೆ, ಇತರ ಎಲ್ಲಾ ಗಣ್ಯರೇ, ಸಭಾಸದರೇ ತಮಗೆಲ್ಲರಿಗೂ ನನ್ನ ಗೌರವಪೂರ್ವಕ ನಮಸ್ಕಾರಗಳು ಎನ್ನುವ ಮೂಲಕ ಸಾಹಿತಿ ಹಂಪನಾ ಅವರು ಇಂದು ದಸರಾ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಮತ್ತು ಡಿಸಿಎಂ ಹಾಗೂ ಸಚಿವರುಗಳನ್ನು ಹಾಡಿ ಹೊಗಳಿದ್ದಾರೆ.
ನಮ್ಮ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ, ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿರುವುದನ್ನು ನೋಡಿದರೆ ಅವರೂ ಕೂಡ ಗರಡಿಮನೆಯಲ್ಲಿ ಸಾಮುಮಾಡಿರಬೇಕೆಂಬ ಗುಮಾನಿ ನನಗಿದೆ. ಹೌದು ಜೀವನವೇ ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ. ಆದರೆ ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕಾಗುತ್ತದೆ ಎಂದು ಹೇಳಿದರು.
ತಾಯಿ ಚಾಮುಂಡಿಗೆ ಹಂಪನಾ ಅವರ ಮೂರು ಬೇಡಿಕೆಗಳು
- ಇಸ್ರೇಲ್-ಪ್ಯಾಲಸ್ಟೈನ್, ರಷಿಯಾ-ಉಕ್ರೈನ್ ಯುದ್ಧ ನಿಂತು, ನಿತ್ಯ ನಡೆಯುತ್ತಿರುವ ಅಮಾಯಕರ ಮಾರಣಹೋಮ ನಿಲ್ಲಲು ಆ ರಾಷ್ಟ್ರನಾಯಕರು ಕೂಡಲೆ ಜೀವಪರ ಕಾಳಜಿ ತೋರುವಂತೆ ಅವರಿಗೆ ಪ್ರೇರಣೆ ನೀಡಬೇಕೆಂದು ಬೇಡುತ್ತೇನೆ.
- ಹೆಣ್ಣು ಭ್ರೂಣ ಹತ್ಯೆ ತಡೆಯಲೂ ಚಾಮುಂಡಾದೇವಿಯು ತಾಯಿತಂದೆಯರಿಗೆ ಸದ್ಭುದ್ಧಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. ಹೆಣ್ಣು ದೇವತೆಗಳು ತೆಪ್ಪಗಿರುವುದು ಕಂಡು ಅಚ್ಚರಿಯಾಗುತ್ತದೆ. ದೇವರುಗಳಿಗೂ ಬಲಿಷ್ಠರನ್ನು ಕಂಡರೆ ಭಯ, ಅಮಾಯಕ ಮುಗ್ಧರಿಗೇ ಕಷ್ಟ ಕೊಡುವರು. ಈ ದೇವರುಗಳು ಕೂಡ ಕೋಳಿ, ಕುರಿ, ಮೇಕೆ ಬಲಿ ಬೇಡುವರೆ ಹೊರತು ಹುಲಿ, ಸಿಂಹ, ಚಿರತೆ ಕಿರುಬ ಬಲಿ ಕೊಡಿ ಎಂದು ಕೇಳಲು ಹೆದರಿಕೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಶಾಸನ ಸಭೆ ಲೋಕಸಭೆಯಲ್ಲಿ ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಮಸೂದೆಗೆ ಅಡ್ಡಿ ಮಾಡುತ್ತಲೇ ಇದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗಕೂಡದೆಂದು ಬೆದರಿಸುವ ಒಂದು ದೇಶವೂ ಇದೆಯೆಂಬುದು ಶೋಚನೀಯವಷ್ಟೇ ಅಲ್ಲ ಖಂಡನೀಯ ಕೂಡ.
- ಬಹು ದೊಡ್ಡ ರಾಷ್ಟ್ರೀಯ ಸಮಸ್ಯೆಯೆಂದರೆ ನಿರುದ್ಯೋಗ ಸಮಸ್ಯೆ ಯುವಜನರು ಹತಾಶರಾಗಿದ್ದಾರೆ.ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಬೇಕೆಂದು ಯುವಜನತೆಯ ಪರವಾಗಿ ದೇವಿಯನ್ನು ಪ್ರಾರ್ಥಿಸುತ್ತೇನೆ.ಕನ್ನಡ ನಾಡು ನುಡಿ ನೆಲ ಜಲ ಕಲೆ ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವವರನ್ನು ಕೊಲೆಗಾರರಂತೆ ಕಾಣದೆ. ಪ್ರೀತಿ ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಪ್ರೇರಣೆ ಕೊಡುವಂತೆ ಪ್ರಾರ್ಥಿಸುತ್ತೇನೆ ಎಂದು ತಾಯಿ ಚಾಮುಂಡೇಶ್ವರಿಗೆ ಸಾಮಾಜಿಕ ಕಳಕಳಿಯ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಇದೇ ವೇಳೆ ಸರಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲೆಂದು ಬೇಡುತ್ತೇನೆ. ಕೆಡವುವುದು ಸುಲಭ, ಕಟ್ಟುವುದು ಕಷ್ಟ, ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾನಷ್ಟೆ ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿ, ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು, ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದುವರ್ಷದಲ್ಲಿ ಸಜ್ಜಾಗಬಹುದು. ದಿನನಿತ್ಯ ಪತ್ರಿಕೆಗಳಲ್ಲಿ ಪರಸ್ಪರ ದೋಷಾರೋಪಣೆ, ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಓದಿ, ಯುವಕರು ಇದನ್ನೇ ಮಾದರಿಯಾಗಿ ಮುಂದುವರಿಸಿದರೆ ಏನುಗತಿ ಎಂದು ಜನರು ಬೇಸರಗೊಂಡಿದ್ದಾರೆ. ತಾಯಿ ಚಾಮುಂಡೇಶ್ವರೀದೇವೀ, ಇನ್ನು ಮುಂದೆ ಈ ಪದ್ಧತಿ ನಿಂತು ಸಮಾಜಮುಖಿ ಚಿಂತನೆಯನ್ನು ಒಳಗೊಂಡು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಹಮ್ಮಿಕೊಂಡಿರುವ ಯೋಜನೆ ಯೋಚನೆಗಳನ್ನು ನಿರೂಪಿಸುವಂತೆ ಸ್ಪೂರ್ತಿ ಕೊಡಬೇಕೆಂದು ಪ್ರಾರ್ಥಿಸುತ್ತೇನೆ. ಕರ್ನಾಟಕದ ಜನರ ಪ್ರತಿನಿಧಿಯಾಗಿ ಈ ನಾಡ ಹಬ್ಬವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ನನ್ನ 88 ವರ್ಷದ ದೀರ್ಘ ಜೀವನದಲ್ಲಿ ಮರೆಯಲಾಗದ ಮಧುರ ಸ್ಮೃತಿಯ ಕ್ಷಣಗಳನ್ನು ಕಲ್ಪಿಸಿಕೊಟ್ಟ ನಮ್ಮ ಹೆಮ್ಮೆಯ ಕರ್ನಾಟಕ ಸರಕಾರಕ್ಕೆ ಅಂತಃಕರಣ ತುಂಬಿದ ಕೃತಜ್ಞತೆಗಳು ಎಂದಿದ್ದಾರೆ.