ಮೈಸೂರು: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಗೆ ಠಾಣಾ ಸಿಬ್ಬಂದಿಗಳು ಸೀಮಂತ ಶಾಸ್ತ್ರ ಮಾಡಿದ್ದಾರೆ. ಬೈಲುಕುಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುನಿತಾ ಎಂಬ ಮಹಿಳಾ ಪೇದೆ ತುಂಬು ಗರ್ಭೀಣಿಯಾಗಿದ್ದು, ಹೆರಿಗೆ ಸುಖಕರವಾಗಿರಲೆಂದು ಹಾರೈಸಿ ಸಹೋದ್ಯೋಗಿಗಳು ಅಕ್ಷತೆ ಹಾಕಿ ಬಾಗಿನ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜಂಜಾಟದಲ್ಲಿ ಮುಳುಗಿರುವ ಪೊಲೀಸರ ಈ ಕಾರ್ಯಕ್ಕೆ ಇದೀಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ನಿನ್ನೆ ಠಾಣೆಯ ಸಭಾಂಗಣದಲ್ಲಿ ಸುನಿತಾರಿಗೆ ಅರಶಿಣ ಕುಂಕುಮ ಹಚ್ಚಿ, ಹಸಿರುಬಳೆ ತೊಡಿಸಿ, ರೇಷ್ಮೆ ಸೀರೆ, ಅಕ್ಕಿ, ಫಲ ತಾಂಬೂಲ ಸಹಿತ ಉಡಿ ತುಂಬುವ ಶಾಸ್ತ್ರ ನೆರವೇರಿಸಿದ ಸಹೋದ್ಯೋಗಿಗಳು ಅಕ್ಷತೆ ಹಾಕಿ ಶುಭ ಹಾರೈಸಿದ್ದಾರೆ. ಇದೇ ವೇಳೆ ಪುರುಷ ಸಹೋದ್ಯೋಗಿ ಮಿತ್ರರು ಕೂಡ ತಮ್ಮ ಸಹೋದ್ಯೋಗಿಗೆ ಶುಭಹಾರೈಸಿದ್ದು, ಪೊಲೀಸ್ ಠಾಣೆಯಲ್ಲಿಯೇ ಸೀಮಂತ ಕಾರ್ಯ ನಡೆಸಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ಸಹೋದ್ಯೋಗಿಗೆ ಸಿಂಪಲ್ ಸೀಮಂತಶಾಸ್ತ್ರ ನೇರವೇರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಬೈಲುಕುಪ್ಪ ಪೊಲೀಸ್ ಸಿಬ್ಬಂದಿಗಳು. ಸೀಮಂತ ಕಾರ್ಯಕ್ರಮದಲ್ಲಿ ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್, ಎ ಎಸ್ ಐ ವೆಂಕಟೇಶ್, ಮಹಿಳಾ ಸಿಬ್ಬಂದಿಗಳಾದ ಅನಿತಾ, ಸವಿತಾ, ಪ್ರೀತು, ಅಶ್ವಿತಾ ಸೇರಿದಂತೆ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದರು.