ಹೆಚ್.ಡಿ.ಕೋಟೆ ತಾಲೂಕಿನ ಬದನಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಮರಿ ಬಿದ್ದಿದ್ದು ಅದರ ಸ್ಥಳಾಂತರಕ್ಕೆ ಗ್ರಾಮದ ಯುವಕರು ಅಡ್ಡಿಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಜತೆ ಯುವಕರು ವಾಗ್ವಾದಕ್ಕೆ ಇಳಿದಿದ ಘಟನೆ ನಡೆದಿದೆ.
ಕಳೆದ ಮೂರು ತಿಂಗಳಿನಿಂದ ಗ್ರಾಮದಲ್ಲಿ ಚಿರತೆಗಳ ಕಾಟ ಹೆಚ್ಚಾಗಿತ್ತು. ಸಾಕು ಪ್ರಾಣಿಗಳ ಮೇಲೆ ಚಿರತೆಗಳು ದಾಳಿ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಹಲವು ಚಿರತೆಗಳ ಪೈಕಿ ಒಂದು ಚಿರತೆ ಮರಿ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು ಈ ವೇಳೆ ಗ್ರಾಮದ ಯುವಕರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿಯಾಗಿದೆ. ಸಾಕು ಪ್ರಾಣಿಗಳನ್ನು ಕೊಂದಿರುವುದಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲಿಯವರೆಗೂ ಚಿರತೆ ತೆಗೆದುಕೊಂಡು ಹೋಗದಿರುವಂತೆ ಪಟ್ಟು ಹಿಡಿದಿದ್ದಾರೆ. ಆಗ ಯುವಕರನ್ನು ಸಮಾಧಾನ ಮಾಡಿದ ಗ್ರಾಮದ ಮುಖಂಡರು, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆ ಮರಿ ರವಾನಿಸಲಾಗಿದೆ.