ಮೈಸೂರು: ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಅಧಿಕಾರಿಗಳಿಂದ ನೋಟಿಸ್ ಜಾರಿ ಹಿನ್ನೆಲೆ ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ಅಧಿಕಾರಿಗಳ ನಡೆಯನ್ನು ಸ್ವಾಗತ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ಇದಾಗಿರುವುದರಿಂದ ವಿಚಾರಣೆ ಯಾವ ರೀತಿ ಮಾಡುತ್ತಾರೆ ಎಂಬ ಅನುಮಾನವಿತ್ತು. ಈಗ ವಿಚಾರಣೆಗಾಗಿ ಸಿಎಂಗೆ ಕಚೇರಿಗೆ ಆಗಮಿಸುವಂತೆ ನೋಟಿಸ್ ನೀಡಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮೊದಲಿಂದಲೂ ಒತ್ತಾಯ ಮಾಡುತ್ತಿದ್ದೇನೆ. ಯಾಕೆ ಸಿಬಿಐ ವಹಿಸಬೇಕು ಎಂದು ಉಚ್ಚ ನ್ಯಾಯಾಲಯಕ್ಕೆ ನಮ್ಮ ವಕೀಲರು ಮನವರಿಕೆ ಮಾಡುತ್ತಾರೆ ಎಂದರು.
ಮುಡಾ ಆಯುಕ್ತರ ಕಚೇರಿಯಲ್ಲಿ ಸಿಸಿಟಿವಿ ಹಾಗೂ ಡಿವಿಆರ್ ನಾಪತ್ತೆ ವಿಚಾರಕ್ಕೆ ಮಾತಾಡಿದ ಅವರು, ಸಿಸಿಟಿವಿ, ಡಿವಿಆರ್ ಗಳು ಕೂಡ ಈ ಪ್ರಕರಣದಲ್ಲಿ ಸಾಕ್ಷಿಯಾಗಲಿವೆ.ಈಗಾಗಲೇ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯಾವ ರೀತಿ ತನಿಖೆ ನಡೆಯುತ್ತದೆ ಎಂಬುದನ್ನು ಕಾದು ನೋಡೋಣ. ಮುಡಾ ಹಗರಣದ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ಮೈಸೂರಿನಲ್ಲಿ ಆರ್ ಟಿ ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದರು.