ರಾಜಸ್ಥಾನ ಮೂಲದ ಉದ್ಯಮಿ ಜೊತೆ ಮದುವೆ ವದಂತಿ ಬಗ್ಗೆ ಕೊನೆಗೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೌನ ಮುರಿದಿದ್ದು, ಅಂತೆಕಂತೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿರುವ ರಮ್ಯಾ , ಮಾಧ್ಯಮದವರೇ ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಎಷ್ಟು ಬಾರಿ ಎಂಬುದರ ಲೆಕ್ಕವೇ ನನಗಿಲ್ಲ. ಒಂದು ವೇಳೆ ಮದುವೆಯಾದರೆ ನಾನೇ ಅದನ್ನು ನಿಮಗೆ ತಿಳಿಸುತ್ತೇವೆ. ಅನಧಿಕೃತ ಮೂಲಗಳಿಂದ ಬರುವ ವದಂತಿ ಹಬ್ಬಿಸುವುದನ್ನು ದಯವಿಟ್ಟು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.
ರಮ್ಯಾ ಅವರ ಅಭಿಮಾನಿಗಳು ಸಾಕಷ್ಟು ಭಾರೀ ರಮ್ಯಾ ಅವರ ಬಳಿ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನ ಮುಂದಿಡುತ್ತಿದ್ದರು. ಈ ಬಗ್ಗೆ ಎಲ್ಲಿಯೂ ಸ್ಪಷ್ಟ ಉತ್ತರ ಕೊಡದೆ ರಮ್ಯಾ ಸೈಲೆಂಟ್ ಆಗುತ್ತಿದ್ದರು. ಆದರೆ ಟೆಕ್ಸ್ಟೈಲ್ ಉದ್ಯಮಿಯೊಬ್ಬರ ಜೊತೆ ರಮ್ಯಾ ಅವರ ನಿಶ್ಚಿತಾರ್ಥ ಆಗಿದೆ ಎನ್ನುವ ಸುದ್ದಿ ಇತ್ತೀಚೆಗೆ ವೈರಲ್ ಆಗಿತ್ತು. ಅಲ್ಲದೆ ನವೆಂಬರ್ ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಲಿದೆ ಎಂಬ ವಿಚಾರ ನಟಿ ರಮ್ಯಾ ಅವರ ಮದುವೆಯ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.ಅಲ್ಲದೆ ಮಾಧ್ಯಮಗಳಲ್ಲಿ ರಮ್ಯಾ ಅವರ ಮದುವೆ ಬಹುತೇಕ ಫಿಕ್ಸ್ ಆಗಿದೆ ಎಂದು ವರದಿಯಾಗಿತ್ತು. ಇದೀಗ ಈ ವಿಚಾರವಾಗಿ ಮೌನ ಮುರಿದಿರುವ ನಟಿ ರಮ್ಯಾ ಗಾಳಿ ಸುದ್ದಿಗಳನ್ನು ತಳ್ಳಿಹಾಕಿ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
ಮೋಹಕ ನಟಿ ರಮ್ಯಾಗೆ ಈಗ 41 ವರ್ಷ ವಯಸ್ಸು. ಪುನೀತ್ ರಾಜ್ಕುಮಾರ್ ಅಭಿನಯದ ʼಅಭಿʼ ಚಿತ್ರದ ಮೂಲಕ 2003ರಲ್ಲಿ ರಮ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮ್ಯಾ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.