- ಹಿರಿಯ ಸಿವಿಲ್ ನ್ಯಾಯಾಧೀಶರು ಸುನೀಲ್ ಎಸ್.ಹೊಸಮನಿ ಕರೆ
- ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಕೋಲಾರ: ಮನುಷ್ಯನ ಜೀವನದಲ್ಲಿ ಇಂದು ಆಹಾರ,ನೀರಿನಷ್ಟೇ ಕಾನೂನು ಅತಿ ಮುಖ್ಯವಾಗಿದ್ದು, ದೈನಂದಿನ ಬದುಕಿಗೆ ಅಗತ್ಯವಾದ ಕನಿಷ್ಟ ಕಾನೂನುಗಳ ಅರಿವು ಅಗತ್ಯವಿದೆ, ನಿಮ್ಮ ಪೋಷಕರ ಆಶಯ ಈಡೇರಿಕೆ ನಿಮ್ಮ ಜವಾಬ್ದಾರಿ ಎಂಬುದನ್ನು ಅರಿತು ಹಕ್ಕುಗಳನ್ನು ಕೇಳುವುದರ ಜತೆಗೆ ಕರ್ತವ್ಯ ಪಾಲನೆಯೂ ಮುಖ್ಯ ಎಂಬುದನ್ನು ವಿದ್ಯಾರ್ಥಿನಿಯರು ಅರಿಯಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಕರೆ ನೀಡಿದರು.
ನಗರದ ಕೋಲಾರದ ಕೋರ್ಟ್ ವೃತ್ತದಲ್ಲಿನ ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮನುಷ್ಯ ಭ್ರೂಣದಿಂದ ಸಾಯುವವರೆಗೂ ಕಾನೂನಿನ ಅಡಿಯೇ ಬದುಕಬೇಕಾಗಿದೆ, ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ ಎಂದ ಅವರು, ಇತ್ತೀಚೆಗೆ ಭ್ರೂಣಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆಯಂತಹ ಅಪರಾಧಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ದ ನೀವು ಧ್ವನಿಯೆತ್ತಬೇಕು, ಪೊಲೀಸರಿಗೆ ತಿಳಿಸಬೇಕು ಎಂದರು.
ಗಲ್ಪೇಟೆ ಪಿಎಸ್ಐ ವಿದ್ಯಾಶ್ರೀ ಮಾತನಾಡಿ, ತಂಬಾಕು, ಮಾದಕ ವಸ್ತು ನಿಯಂತ್ರಣಕ್ಕೆ ಕೋಟ್ಟಾ ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ ಕಾಯಿದೆ ಜಾರಿಯಲ್ಲಿದ್ದು, ೧೮ ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದ ಅಪರಾಧವಾಗಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮಾತನಾಡಿ, ಬಾಲ್ಯವಿವಾಹ ಸಮಾಜಕ್ಕೆ ಕಂಟಕವಾಗಿದೆ ಎಂದ ಅವರು ಇದರ ಸಂಪೂರ್ಣ ತಡೆಗೆ ವಿದ್ಯಾರ್ಥಿ ಸಯುದಾಯದ ಸಹಕಾರ ಅಗತ್ಯವಿದೆ, ನಿಮ್ಮ ಸುತ್ತಮುತ್ತ ಬಾಲ್ಯವಿವಾಹ ಆಗುತ್ತಿದ್ದರೆ ನೀವು ಕೂಡಲೇ ೧೦೯೮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.
ಹಾಸ್ಟೆಲ್ ಮೇಲ್ವಿಚಾರಕಿ ಶೋಭಾ, ವೃತ್ತಿಪರ ತರಬೇತಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮಾಲಾಶ್ರೀ ಮತ್ತಿತರರಿದ್ದು, ೧೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದುಕೊಂಡರು.