ರಾಮನಗರ : ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಎಸ್ ಡಿಪಿಐ ಕಾರ್ಯಕರ್ತರು ಚನ್ನಪಟ್ಟಣದ ಶೇರ್ವಾ ಹೋಟೆಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ಮತ್ತು ಜೆಡಿ ಎಸ್ ಮೈತ್ರಿ ಪಕ್ಷಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೇ ಆ ನೀಚ ಕೃತ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿರುವ ಪ್ರಜ್ವಲ್ ನಡೆ ಖಂಡನೀಯ. ಈ ಬಗ್ಗೆ ನೊಂದ ಮಹಿಳೆಯರು ದೂರು ನೀಡಿದ್ದು ದೇಶದಲ್ಲಿ ನಡೆದಿರುವ ಅತಿ ದೊಡ್ಡ ಲೈಂಗಿಕ ಹಗರಣ ಇದಾಗಿದೆ. ಎಚ್.ಡಿ. ರೇವಣ್ಣ ಅವರು ಈಗಾಗಲೇ ಬಂಧನವಾಗಿದ್ದಾರೆ. ಇಷ್ಟೆಲ್ಲ ರಾದ್ಧಾಂತ ನಡೆಯುತ್ತಿದ್ದರೂ ಬಿಜೆಪಿe ನಾಯಕರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮ್ಜದ್ ಷರೀಫ್, ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ವಸೀಂ ಉಲ್ಲ ಷರೀಫ್, ಎಸ್ಡಿಪಿಐ ಚನ್ನಪಟ್ಟಣ ವಿಧಾನಸಭೆ ಅಧ್ಯಕ್ಷ ಫಾಜಿಲ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.