ಹಾವೇರಿ: ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಎಂದೊಡನೆ ಎಂತಹವರ ಮನಮಿಡಿಯುತ್ತದೆ. ಬದುಕಿದ್ದಷ್ಟು ದಿನ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳ ಪ್ರೀತಿಯನ್ನ ಸಂಪಾದಿಸಿದ ಮಹಾನುಭಾವ. ಪುನೀತ್ ನಮ್ಮನ್ನೆಲ್ಲಾ ಅಗಲಿ 3 ವರ್ಷ ಕಳೆಯುತ್ತಾ ಬಂದಿದೆ. ಆದ್ರೆ, ಅವರ ಅಭಿಮಾನಿಗಳು ಇವತ್ತಿಗೂ ಅಪ್ಪು ಮೇಲೆ ಅಪಾರ ಅಭಿಮಾನವನ್ನ ಹೊಂದಿದ್ದಾರೆ. ಈಗ ಅಪ್ಪು ಹೆಸರಲ್ಲಿ ದೇಗುಲವನ್ನ ಸಹ ನಿರ್ಮಾಣ ಮಾಡಿದ್ದಾರೆ.
ದೊಡ್ಮನೆ ಕುಡಿ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಡ್ಯಾನ್ಸ್ ಮಾಸ್ಟರ್ ಪ್ರಕಾಶ್, ಮೂಲತಃ ಯಲಗಚ್ಚ ಗ್ರಾಮದ ಮೊರಬದವರು. ಈತ ತಮ್ಮ ಮನೆಯ ಸ್ವಂತ ಜಾಗದಲ್ಲಿ ಅವರ ನೆಚ್ಚಿನ ನಟ ಪುನೀತ್ ರಾಜಕುಮಾರ್ ಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ತನ್ನ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ದೇವಸ್ಥಾನವನ್ನು ಸಂಪೂರ್ಣವಾಗಿ ನಿರ್ಮಾಣ ಮಾಡಿರುವ ಇವರು, ಇಂದು ದೇವಸ್ಥಾನದ ಉದ್ಘಾಟನೆ ಹಾಗೂ ಪುನೀತ್ ರಾಜಕುಮಾರ ಪುತ್ಥಳಿ ಅನಾವರಣ ಮಾಡಿದ್ದಾರೆ. ಪುನೀತ್ ದೇವಸ್ಥಾನವನ್ನು ಅವರ ಮಡದಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟನೆ ಮಾಡಿರುವುದು ವಿಶೇಷ.
ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ನಟ, ಸಹನಟರು ಹಾಗೂ ರಾಜಕಾರಣಿಗಳು ಮತ್ತು ಹಲವು ಮಠಾಧೀಶರು ಆಗಮಿಸಲಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭರದ ಸಿದ್ಧತಾ ಕಾರ್ಯಗಳು ಕೂಡ ನಡೆದಿತ್ತು. ದೇವಸ್ಥಾನ ಕಟ್ಟಲು ಒಟ್ಟು 9 ಲಕ್ಷ ಖರ್ಚಾಗಿದೆ. ಇದನ್ನೆಲ್ಲಾ ಅಭಿಮಾನದಿಂದ ಮಾಡಿದ್ದೇನೆ. ಬಹಳಷ್ಟು ಅಭಿಮಾನಿಗಳು ಸಹ ಸಹಾಯ ಮಾಡಿದ್ದಾರೆ. ಎಲ್ಲರೂ ಕೈಜೋಡಿಸಿದ್ದಾರೆ. ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ವೇದಿಕೆಗೆ ಆಗಮಿಸಿದ್ದಾರೆ ಎಂದು ದೇವಸ್ಥಾನ ನಿರ್ಮಿಸಿರುವ ಪ್ರಕಾಶ್ ತಿಳಿಸಿದ್ದಾರೆ.