ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹೊಗೆನಕಲ್ ಫಾಲ್ಸ್ ನಲ್ಲಿ ತೆಪ್ಪ ಸಂಚಾರ ಸ್ಥಗಿತ ಮಾಡಲಾಗಿದೆ. ತಮಿಳುನಾಡಿನ ಪೋಲಿಸರ ದೌರ್ಜನ್ಯ ಖಂಡಿಸಿ ಕನ್ನಡಿಗರು ತೆಪ್ಪ ಸಂಚಾರವನ್ನು ಸ್ಥಗಿತ ಮಾಡಿದ್ದಾರೆ.

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಡದ ಪೂರ್ವ ಭಾಗದಲ್ಲಿರುವ ಹೊಗೇನಕಲ್ ಫಾಲ್ಸ್ ಬಳಿಯಿರುವ ಮಾರುಕೊಟ್ಟಾಯ್ ನಿವಾಸಿಗಳು ಪ್ರತಿಭಟನೆ ನಡೆಸಿದ್ದು, ಕರ್ನಾಟಕದ ಕಡೆಯಿಂದ ಹೊಗೇನಕಲ್ ಫಾಲ್ಸ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ತೆಪ್ಪದ ಸಂಚಾರ ಸ್ಥಗಿತಗೊಳಿಸಿದ್ದಾರೆ. ಕಳೆದ 50 ವರ್ಷಗಳಿಂದಲೂ ತೆಪ್ಪ ಓಡಿಸಿಕೊಂಡು ಜೀವನ ಮಾಡುತ್ತಿರುವ ಕನ್ನಡಿಗರಿಗೆ ನೆರೆಯ ರಾಜ್ಯ ತಮಿಳುನಾಡಿನ ಪೋಲಿಸರು ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹೊಗೇನಕಲ್ ಫಾಲ್ಸ್ ನಲ್ಲಿ ತೆಪ್ಪ ಓಡಿಸಿಕೊಂಡು ಜೀವನ ಮಾಡುವ 300 ಕ್ಕೂ ಹೆಚ್ಚು ಸ್ಥಳೀಯ ಕನ್ನಡಿಗರ ಮೇಲೆ ತಮಿಳುನಾಡು ಪೋಲಿಸರು ನಿರಂತರ ಕಿರುಕುಳ ನೀಡುತ್ತಿದ್ದು, ತಮಿಳುನಾಡಿನ ಪೊಲೀಸರ ದೌರ್ಜನ್ಯಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಪ್ಪ ಓಡಿಸಿಕೊಂಡು ಆ ಭಾಗಕ್ಕೆ ಹೋದರೆ ತಮಿಳನಾಡಿನ ಪೊಲೀಸರು ಕನ್ನಡಿಗರ ಬಳಿಯಿರುವ ಹಣ ಮತ್ತು ಮೊಬೈಲ್ಗಳನ್ನು ಕಸಿದು ಕಳುಹಿಸುತ್ತಾರೆ. ಅಲ್ಲದೆ ಬಾಯಿಗೆ ಬಂದಂತೆ ನಿಂದನೆ ಮಾಡುತ್ತಾರೆ. ತಮಿಳುನಾಡಿನ ನೂರಾರು ತೆಪ್ಪಗಳು ಕರ್ನಾಟಕದ ಭಾಗಕ್ಕೆ ಬಂದು ಹೋಗತ್ತವಾದರೂ, ನಮ್ಮನ್ನು ಮಾತ್ರ ಆ ಕಡೆಗೆ ಬಿಡುವುದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದಿದ್ದಾರೆ.
ಇನ್ನೂ ತೆಪ್ಪ ಸಂಚಾರವನ್ನು ಸ್ಥಗಿತಗೊಳಿಸಿರುವ ಕನ್ನಡಿಗರು ನ್ಯಾಯ ಕೊಡಿಸುವವರಗೂ ತೆಪ್ಪವನ್ನೇ ಓಡಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳೀಯ ಜಿಲ್ಲಾಡಳಿತ ತಮಿಳುನಾಡು ಪೋಲಿಸರೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡಿ ನಮಗೆ ನ್ಯಾಯ ಕೊಡಿಸಲಿ ಎಂದು ಗಡಿನಾಡ ಕನ್ನಡಿಗರು ಅಂಗಲಾಚಿದ್ದಾರೆ.
