ಮೈಸೂರು , ಮಾರ್ಚ್ 20, 2025 :ಬಡತನದಲ್ಲಿ ಬೆಂದ ಕುಟುಂಬವೊಂದು ಕೇವಲ 14 ಸಾವಿರಕ್ಕೆ ಹೆಣ್ಣು ಮಗು ಮಾರಾಟ ಮಾಡಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದ ನೀಲಕಂಠನಗರದಲ್ಲಿ ಜರುಗಿದೆ.

ನಂಜನಗೂಡಿನ ಅನಿಲ್ ಕುಮಾರ್ ಹಾಗೂ ಸೌಮ್ಯ ದಂಪತಿಗೆ ಮೂರು ಮಕ್ಕಳು. ದಂಪತಿಗೆ ಹುಟ್ಟಿದ ಮೂರು ಮಕ್ಕಳೂ ಹೆಣ್ಣಾದ ಕಾರಣ, ಮಗುವಿನ ಅವಶ್ಯಕತೆಯಿದ್ದ ಗುಂಡ್ಲುಪೇಟೆ ನಿವಾಸಿಯೊಬ್ಬರಿಗೆ ಮೂರನೇ ಮಗು ಅಮೂಲ್ಯಳನ್ನು ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಪ್ರಕರಣ ಬೆಳಕಿಗೆ ಬಂದ ನಂತರ ನಂಜನಗೂಡು ಪೊಲೀಸರು ಹಾಗೂ ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ, ಮಾರಾಟವಾದ ಮಗುವನ್ನು ವಶಕ್ಕೆ ಪಡೆದಿದ್ದು, ಯಾರ ವಿರುದ್ಧವೂ ಪ್ರಕರಣ ದಾಖಲು ಮಾಡದೇ ಕೇವಲ ಮಧ್ಯವರ್ತಿಗಳಂತೆ ವರ್ತಿಸಿ ಆರೋಪಿಗಳನ್ನು ವಾಪಸ್ ಕಳುಹಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮಗು ಮಾರಾಟ ಆಗಿದೆ ಎಂಬ ಮಾಹಿತಿ ತಿಳಿದವರು ಅಂಗನವಾಡಿ ಕಾರ್ಯಕರ್ತೆ ಲಾವಣ್ಯ ಎಂಬುವರಿಗೆ ದೂರು ನೀಡಿದ್ದಾರೆ. ಕೂಡಲೇ ಲಾವಣ್ಯರವರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿ, ನಂತರ ಸ್ಥಳೀಯ ಮುಖಂಡರಾದ ಅನಂತ್ ರವರಿಗೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ನಂತರ ಅನಂತ್ ಮಗುವನ್ನ ಖರೀದಿಸಿದವರನ್ನು ಸಂಪರ್ಕಿಸಿದಾಗ 14 ಸಾವಿರಕ್ಕೆ ಮಗು ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಅಲ್ಲದೆ ಮಗು ಖರೀದಿ ಮಾಡಿರುವ ಗುಂಡ್ಲುಪೇಟೆ ಮೂಲದವರು ನಮಗೆ ನಮ್ಮ ಹಣ ಕೊಟ್ಟರೆ ಮಗು ಕೊಡುವುದಾಗಿ ತಿಳಿಸಿದ್ದಾರೆ.
ಮೊದಲು ಮಗುವನ್ನು ತಂದು ಕೊಡಿ ನಂತರ ಹಣದ ವಿಚಾರ ಮಾತನಾಡೋಣ ಎಂದು ತಿಳಿಸಿದ ಅನಂತ್ ಮಾತಿಗೆ ಒಪ್ಪಿದ ಗುಂಡ್ಲುಪೇಟೆ ಪೋಷಕರು ಮಗುವನ್ನು ವಾಪಸ್ ತಂದು ಕೊಟ್ಟಿದ್ದಾರೆ. ಮಗು ವಾಪಸ್ ಬಂದ ನಂತರ ನಂಜನಗೂಡು ಪೊಲೀಸರು ಪ್ರಕರಣದ ನಡುವೆ ಎಂಟ್ರಿ ನೀಡಿದ್ದು, ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳು ಸೇರಿದಂತೆ ಮಾರಾಟವಾದ ಮಗುವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಯಾರ ವಿರುದ್ಧವೂ ಪ್ರಕರಣ ದಾಖಲು ಮಾಡದ ಪೊಲೀಸರು, ಮಗುವನ್ನು ಮೈಸೂರಿನಲ್ಲಿರುವ ಶಿಶುಪಾಲನಾ ಕಚೇರಿ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಮಗುವನ್ನು ಮಾರಾಟ ಮಾಡಿದವರನ್ನಾಗಲಿ, ಮಧ್ಯವರ್ತಿಯನ್ನಾಗಲಿ ಅಥವಾ ಖರೀದಿಸದವರನ್ನಾಗಲಿ ವಶಕ್ಕೆ ಪಡೆಯದ ಪೊಲೀಸರು, ಕೇವಲ ಮಧ್ಯವರ್ತಿಗಳಂತೆ ವರ್ತಿಸಿ ಆರೋಪಿಗಳನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
