ತೀವ್ರ ಕುತೂಹಲ ಕೆರಳಿಸಿದ್ದ ನಂಜನಗೂಡು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಶ್ರೀಕಂಠಸ್ವಾಮಿ ಅಧ್ಯಕ್ಷರಾಗಿ, ಜೆಡಿಎಸ್ ನ ರಿಯಾನ ಬಾನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 31 ಸದಸ್ಯ ಬಲ ಹೊಂದಿರುವ ನಂಜನಗೂಡು ನಗರಸಭೆಯಲ್ಲಿ ಬಿಜೆಪಿ 15, ಕಾಂಗ್ರೆಸ್ 10, ಜೆಡಿಎಸ್ 03 ಹಾಗೂ 03 ಮಂದಿ ಪಕ್ಷೇತರ ಸದಸ್ಯರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಶ್ರೀಕಂಠಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ರಿಯಾನ ಬಾನು ಹಾಗೂ ಬಿಜೆಪಿ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಪಿ ದೇವು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಅನಂತ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೀಕಂಠಸ್ವಾಮಿಗೆ 16 ಮತಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಿಯಾನ ಬಾನು ಅವರಿಗೂ ಕೂಡ 16 ಮತಗಳು ಲಭಿಸಿ ಜಯಶೀಲ ರಾಗಿದ್ದಾರೆ.
ಇನ್ನು ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದೇವು ಅವರಿಗೆ 12 ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ ಅನಂತು ಅವರಿಗೂ ಕೂಡ 12 ಮತಗಳು ಲಭಿಸಿ ಸೋಲನುಭವಿಸಿದ್ದಾರೆ.
ಚುನಾವಣೆಯಲ್ಲಿ ನಾಲ್ಕು ಮಂದಿ ಬಿಜೆಪಿ ಸದಸ್ಯರು ಗೈರು ಹಾಜರಾಗುವುದರ ಜೊತೆಗೆ ಓರ್ವ ಜೆಡಿಎಸ್ ಸದಸ್ಯ ಯಾರಿಗೂ ಮತ ಚಲಾಯಿಸದೇ ತಟಸ್ಥವಾಗಿದ್ದರಿಂದ ಕಾಂಗ್ರೆಸ್ ಗೆಲುವಿನ ಹಾದಿ ಸುಗಮವಾಯಿತು.
ನಂಜನಗೂಡು ನಗರಸಭೆಯ ಮೊದಲ ಅವಧಿಯಲ್ಲಿ ಬಿಜೆಪಿ ಸರ್ಕಾರವಿದ್ದು ಆ ಪಕ್ಷದ ಶಾಸಕರು ಮತ್ತು ಸಂಸದರ ಬೆಂಬಲದೊಂದಿಗೆ ಬಿಜೆಪಿ ನಗರಸಭೆಯ ಆಡಳಿತ ಹಿಡಿದಿತ್ತು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇದೀಗ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದು ಕಾಂಗ್ರೆಸ್ ಶಾಸಕ ದರ್ಶನ್ ಹಾಗೂ ಸಂಸದ ಸುನಿಲ್ ಬೋಸ್ ಅವರ ಎರಡು ಮತಗಳ ಬೆಂಬಲದೊಂದಿಗೆ ಕಾಂಗ್ರೆಸ್ ಸಂಖ್ಯೆ 12ಕ್ಕೇರಿತ್ತು. ಅಲ್ಲದೇ 3 ಪಕ್ಷೇತರ ಸದಸ್ಯರ ಬೆಂಬಲವೂ ಕೂಡ ಅವರಿಗೆ ಸಿಕ್ಕಿ15 ಆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಸದಸ್ಯ ಕಾಂಗ್ರೆಸ್ ಬೆಂಬಲದೊಂದಿಗೆ 16 ಮತ ಗಳಿಸುವುದರೊಂದಿಗೆ ಜಯಗಳಿಸಿದರು.
ಬಿಜೆಪಿ 15, ಮೈತ್ರಿ ಪಕ್ಷ ಜೆಡಿಎಸ್ 03 ಸದಸ್ಯರು ಸೇರಿದಂತೆ ಒಟ್ಟು 18 ಸದಸ್ಯರಿದ್ದು, ಗೆಲ್ಲುವ ಎಲ್ಲಾ ಅವಕಾಶ ಬಿಜೆಪಿ ಮತ್ತು ಜೆಡಿಎಸ್ ಗೆ ಇತ್ತು. ಆದರೆ ಕಾಂಗ್ರೆಸ್ ನ ನೂತನ ಸಂಸದ ಸುನಿಲ್ ಬೋಸ್ ಹಾಗೂ ಶಾಸಕ ದರ್ಶನ್ ಅವರ ರಾಜಕೀಯ ತಂತ್ರಗಾರಿಕೆಯಿಂದ ಬಿಜೆಪಿಯ ನಾಲ್ಕು ಮಂದಿ ಸದಸ್ಯರು ಮತದಾನದಿಂದ ದೂರ ಉಳಿದು ಬಿಜೆಪಿಗೆ ದೊಡ್ಡಮಟ್ಟದ ಹೊಡೆತ ನೀಡಿದ್ದಾರೆ.
ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪಟಾಕಿಗಳನ್ನು ಸಿಡಿಸಿ ಜಯಕಾರದ ಪೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಮತದಾನದ ಬಳಿಕ ಹೊರ ಬಂದ ಸಂಸದರು, ಶಾಸಕರು ಹಾಗೂ ನೂತನ ಅಧ್ಯಕ್ಷರನ್ನು ಕಾರ್ಯಕರ್ತ ಮುಖಂಡರು ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು.
ಚುನಾವಣಾ ಅಧಿಕಾರಿಯಾಗಿ ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್ ಕಾರ್ಯ ನಿರ್ವಹಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿ ವೈ ಎಸ್ ಪಿ ರಘು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿತ್ತು.
ಸಂಸದ ಸುನಿಲ್ ಬೋಸ್, ಶಾಸಕ ದರ್ಶನ್ ಹಾಗೂ ನೂತನ ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ ಚುನಾವಣಾ ರಾಜಕೀಯ ತಂತ್ರಗಾರಿಕೆಯ ಬಗ್ಗೆ ವಿವರಿಸಿದರು. ಮುಂದೆ ಎಲ್ಲರ ಸಹಕಾರದೊಂದಿಗೆ ನಂಜನಗೂಡು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.