ಬೆಂಗಳೂರು : ಕೇವಲ 2 ಸೀಟಿಗಾಗಿ ನಾವು ಇಷ್ಟೆಲ್ಲ ಮಾಡಬೇಕಾ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಧಾನಿ ಮೋದಿ ನೇತೃತ್ವದಲ್ಲಿ ಮಾಡುವ ಸಮಾವೇಶಕ್ಕೆ ಆಯಾ ಪ್ರದೇಶದ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಟಿಕೆಟ್ ಹಂಚಿಕೆ ವೇಳೆಯೂ ಜೆಡಿಎಸ್ ಜತೆ ಸಮಾಲೋಚನೆ ನಡೆಸುತ್ತಿಲ್ಲ ಎಂದು ಜೆಡಿಎಸ್ ನಾಯಕರೂ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಿಟ್ಟಿಗೆ ಇದೀಗ ಮದ್ದರೆಯಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಬಹಿರಂಗವಾಗಿಯೇ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಬಿಟ್ಟುಕೊಟ್ಟಿರುವುದಾಗಿ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಜೊತೆಗೂಡಿ ಕೆಲಸ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ರಾಧಾ ಮೋಹನ್ ದಾಸ್ ಕರೆ ನೀಡಿದ್ದಾರೆ. ಅಲ್ಲಿಗೆ, ಬಿಜೆಪಿ ಜೆಡಿಎಸ್ ನಡುವಿನ ಸೀಟು ಹಂಚಿಕೆ ಗುದ್ದಾಟಕ್ಕೆ ತೆರೆಬಿದ್ದಂತಾಗಿದೆ. ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರು ಸಹ ದೆಹಲಿಗೆ ತೆರಳಿದ್ದು ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಲಿದ್ದಾರೆ. ಆದರೆ, ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟರೆ ಸುಮಲತಾ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.