ಪ್ರತಿನಿಧಿ ವರದಿ ನಾಪೋಕ್ಲು
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಈ ಬಾರಿ ಕಿತ್ತೊಗೆಯಲು ಕಾರ್ಯಕರ್ತರು ಸಜ್ಜಾಗಬೇಕೆಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ನಾಪೋಕ್ಲು ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಶ್ವವೇ ಬೆಚ್ಚಿ ಬೀಳುವ ಭ್ರಷ್ಟಾಚಾರ ನಡೆಸಿಕೊಂಡು ಬಂದಿದೆ ಎಂದು ಆರೋಪಿಸಿದರು. ದೇಶದ ಆರ್ಥಿಕ ಪರಿಸ್ಥಿತಿ ಹಿಂದೆ ಸರಿದಿದೆ. ಮುಂದೆ ಸಂವಿಧಾನದಡಿಯಲ್ಲಿ ಎಲ್ಲ ವರ್ಗದ ಜನಾಂಗದವರನ್ನು ಸಮಾನತೆಯಿಂದ ಕಾಣುವ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಸಚಿವ ಕೆ. ವೆಂಕಟೇಶ್ ಮಾತನಾಡಿ, ಶಾಸಕ ಎ.ಎಸ್.ಪೊನ್ನಣ್ಣ ರಾಜ್ಯದಲ್ಲಿಯೇ ಪ್ರಭಾವಿ ವ್ಯಕ್ತಿಯಾಗಿದ್ದು ಅವರ ಮಾತನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಕೇಳುವಷ್ಟು ಪ್ರಭಾವ ಇದೆ. ಹಾಗಾಗಿ ಪೊನ್ನಣ್ಣ ಅವರ ಗೌರವವನ್ನು ಹೆಚ್ಚಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಎಂ.ಲಕ್ಷಣ್ ಅವರಿಗೆ ಮತ ನೀಡುವಂತೆ ಕೋರಿದರು.
ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಅಧಿಕಾರದ ದಾಹವಾಗಿದೆ. ಜನಸಾಮಾನ್ಯರು ಬೇಕಾಗಿಲ್ಲ, ಜನರು ಏನೇ ಕಷ್ಟ ಅನುಭವಿಸಿದರು ಪರವಾಗಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಮುಂದಿಟ್ಟು ಜನಸಾಮಾನ್ಯರ ಕಷ್ಟಗಳನ್ನು ಅರಿತು ಅವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲೂ ಜನರಿಗೆ ಇದರ ಅರಿವಾಗಿದೆ ಎಂದರು.
ಶಾಸಕ ಪೊನ್ನಣ್ಣ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳು ಅಭಿವೃದ್ಧಿಯ ಒಂದು ಭಾಗವಾಗಿದೆ ಎಂದರು.
ಮೈಸೂರು – ಕೊಡಗು ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಎಂಎಲ್ಸಿ ವೀಣಾಚಯ್ಯ, ಅರುಣ್ ಮಾಚಯ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಎ.ಹಂಸ, ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ನಾಪೋಕ್ಲು ಗ್ರಾಮಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬೊಳ್ಳಂಡ ಶರಿನ್ ಇದ್ದರು.
ಫೋಟೋ 2 ಜಿಕೆಪಿ 02 ; ನಾಪೋಕ್ಲು ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿರುವ ಕಾರ್ಯಕರ್ತರು.