ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಜಯಭೇರಿ ಭಾರಿಸುವ ಮೂಲಕ ಮನು ಭಾಕರ್ 2024ರ ಪ್ಯಾರಿಸ್ ಒಲಂಪಿಕ್ಸ್ ನ ಮೊದಲ ಪದಕವನ್ನ ಭಾರತದ ಮುಡಿಗೇರಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಕಂಚಿನ ಪದಕವನ್ನ ಗೆದ್ದಿದ್ದಾರೆ ಅಲ್ಲದೆ, ಒಲಂಪಿಕ್ಸ್ ಇತಿಹಾಸದಲ್ಲಿ ಶೂಟಿಂಗ್ ವಿಭಾಗದಲ್ಲಿ ಪದಕ ಕೊರಳಿಗೇರಿಸಿಕೊಂಡ ಭಾರತದ ಮೊದಲ ಮಹಿಳೆ ಎಂದೆನಿಸಿಕೊಂಡಿದ್ದಾರೆ .
ಪ್ರಣಯ ನಗರಿ ಪ್ಯಾರಿಸ್ ನಲ್ಲಿ ಭಾನುವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ನ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ, ಭಾರತದ ಮನು ಭಾಕರ್ ಫೈನಲ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ 221.7 ಅಂಕಗಳನ್ನು ಕಲೆಹಾಕಿ ವಿಯೆಟ್ನಾಂ ಮತ್ತು ಚೀನಾವನ್ನ ಹಿಂದಿಕ್ಕುವ ಮೂಲಕ ಮೂರನೇ ಸ್ಥಾನ ಪಡೆದು ಕಂಚಿನ ಪದಕವನ್ನ ಪಡೆದಿದ್ದಾರೆ. ಕೊರಿಯಾದ ಶೂಟರ್ ಗಳು ಮೊದಲ ಸ್ಥಾನ ಪಡೆಯುವ ಮೂಲಕ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡರೆ, ಶ್ರೇಷ್ಠ ಪ್ರದರ್ಶನ ನೀಡಿದ ಭಾರತೀಯ ಶೂಟರ್ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಿಸ್ ಒಲಂಪಿಕ್ಸ್ ನ ಪದಕ ಪಟ್ಟಿಯಲ್ಲಿ ಭಾರತ ಖಾತೆಯನ್ನ ತೆರೆದಿದ್ದಾರೆ. ಕೇವಲ 22 ವರ್ಷದ ಮನು ಭಾಕರ್ ಈ ಬಾರಿಯ ಒಲಂಪಿಕ್ಸ್ ಮೂರನೇ ಸ್ಥಾನ ಪಡೆದು ಕಂಚಿನ ಪದಕವನ್ನ ಗೆಲ್ಲುವ ಮೂಲಕ ಕಳೆದ 20 ವರ್ಷಗಳಲ್ಲಿ ಈ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಶೂಟರ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.
ಕೇವಲ 22ನೇ ವಯಸ್ಸಿಗೆ ಒಲಂಪಿಕ್ಸ್ ಫೈನಲ್ ಪ್ರವೇಶಿಸಿದ “ಮನು ಭಾಕರ್” ಯಾರೀಕೆ? ಬ್ಯಾಗ್ರೌಂಡ್ ಏನು? ಇಲ್ಲಿದೆ ಮಾಹಿತಿ…,
ಹದಿಹರೆಯದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಮನು, ಈ ಹಿಂದೆ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾಗಿಯಾದ್ದರು. ಆದರೆ ರೈಫಲ್ ಕೈ ಕೊಟ್ಟಿದ್ದ ಕಾರಣ ಕಣ್ಣೀರಿಡುತ್ತಾ ಒಲಂಪಿಕ್ಸ್ ಹೊರಬಂದಿದ್ದರು. ಆದರೀಗ ಟೋಕಿಯೊ ಒಲಿಂಪಿಕ್ಸ್ ಕಹಿನೆನಪನ್ನು ಅಳಿಸಿಹಾಕಿ, ಒಲಂಪಿಕ್ಸ್ ನಲ್ಲಿ ಭಾರತದ ಖಾತೆಯನ್ನ ತೆರೆದಿರುವ ಈಕೆ ಮೂಲತಃ ಹರಿಯಾಣದವರು. ಮರ್ಚೆಂಟ್ ನೇವಿಯಲ್ಲಿ ಎಂಜಿನಿಯರ್ ಆಗಿರುವ ರಾಮಕಿಶನ್ ಭಾಕರ್ ಹಾಗೂ ಶಿಕ್ಷಕಿ ಸುಮೇಧಾ ಅವರ ಪುತ್ರಿ ಮನುಭಾಕರ್. ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.
ಒಲಂಪಿಕ್ಸ್ ನಲ್ಲಿ ಇದು ಇವರ ಮೊದಲ ಗೆಲುವಾಗಿದ್ದು, 2 ವಿಶ್ವ ಚಾಂಪಿಯನ್ ಶಿಪ್ ಪಡೆದಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ 1 ಪದಕ, ವಿಶ್ವಕಪ್ ನಲ್ಲಿ ೯ ಮೊದಲ ಸ್ಥಾನ ಹಾಗೂ 2 ದ್ವೀತಿಯ ಸ್ಥಾನ, ಯೂತ್ ಒಲಂಪಿಕ್ ಗೇಮ್ ನಲ್ಲಿ 1 ಪ್ರಥಮ ಮತ್ತು 1 ದ್ವಿತೀಯ ಸ್ಥಾನ, ಐ ಎಸ್ ಎಸ್ ಎಫ್ ಜೂನಿಯರ್ ವಿಶ್ವಚಾಂಪಿಯನ್ ಶಿಪ್ ನಲ್ಲಿ 4 ಮೊದಲ ಮತ್ತು 1 ತೃತೀಯ ಸ್ಥಾನ, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 1 ಮೊದಲ ಸ್ಥಾನವನ್ನ ಪಡೆಯುವ ಮೂಲಕ ಈ ಕಿರಿಯ ವಯಸ್ಸಿನಲ್ಲಿಯೇ ಒಟ್ಟಾರೆ 23 ಪದಕಗಳನ್ನ ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಅಂದಹಾಗೆ ಮನು ಬಾಕರ್ ಶೂಟಿಂಗ್ ಕ್ರೀಡೆಗೆ ಬರಲು ಮುಖ್ಯ ಕಾರಣ, ಈಕೆ ವಾಲಿಬಾಲ್ ಆಡುವಾಗ ಕಣ್ಣಿಗೆ ಗಾಯವಾದದ್ದು. ಬಾಕ್ಸಿಂಗ್, ಸ್ಕೇಟಿಂಗ್, ವಾಲಿಬಾಲ್ ಹಾಗೂ ಸ್ಥಳೀಯ ಮಾರ್ಷಲ್ ಆರ್ಟ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಮನು ಬಾಕರ್, ಒಮ್ಮೆ ವಾಲಿಬಾಲ್ ಆಡುವಾಗ ಕಣ್ಣಿಗೆ ಗಾಯವಾದ ಕಾರಣ ಮತ್ತೆ ಆ ಕ್ರೀಡೆಯ ಕಡೆಗೆ ಮುಖ ಮಾಡದೆ, ಕೇವಲ ಶೂಟಿಂಗ್ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮನುಭಾಕರ್ ಅವರ ವೈಕಲ್ಯತೆಯನ್ನೇ ಅಸ್ತ್ರವನ್ನಾಗಿಸಿ ವಿಶ್ವವೇ ಅವರತ್ತ ತಿರುಗಿ ನೋಡುವಂತೆ ಮಾಡಿದ್ಧಾರೆ.
ಕಾರ್ಗಿಲ್ ಯೋಧ ಜಾಕರ್ ನಿಂದ ಶೂಟಿಂಗ್ ಕಲಿತ ಮನು ಭಾಕರ್!
ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನು ಬಾಕರ್ ಅವರು ಆರಂಭದಲ್ಲಿ ಶೂಟಿಂಗ್ ಕಲಿತದ್ದು ಕಾರ್ಗಿಲ್ ಯೋಧರಿಂದ. ಭಾರತ ಸೇನೆಯ ಶಾರ್ಪ್ ಶೂಟರ್ ಅನಿಲ್ ಜಾಖರ್ ರವರು ಈಕೆಗೆ ಆರಂಭಿಕ ದಿನಗಳಲ್ಲಿ ಶೂಟಿಂಗ್ ಕಲಿಸಿದ ಗುರುಗಳು. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಅನಿಲ್ ಜಾಖರ್, ಕಾರ್ಗಿಲ್ ಯುದ್ಧದ ನಂತರ ನಿವೃತ್ತಿಯಾಗಿ ಹರಿಯಾಣದಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಶೂಟಿಂಗ್ ಕಲಿಸಲು ಅಕಾಡೆಮಿಯನ್ನು ಸ್ಥಾಪಿಸಿದ್ದರು ಮನುಭಾಕರ್ ಕೂಡ ಅವರ ಪ್ರಾರಂಬಿಕ ದಿನಗಳಲ್ಲಿ ಅಭ್ಯಾಸ ಪ್ರಾರಂಭ ಮಾಡಿದ್ದು ಇಲ್ಲಿಯೇ.
ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಜಯಭೇರಿ ಭಾರಿಸುವ ಮೂಲಕ ಮನು ಭಾಕರ್ 2024ರ ಪ್ಯಾರಿಸ್ ಒಲಂಪಿಕ್ಸ್ ನ ಮೊದಲ ಪದಕವನ್ನ ಭಾರತದ ಮುಡಿಗೇರಿಸಿರುವ ಇವರು, ಭಗವದ್ಗೀತೆಯನ್ನ ನಾನು ದಿನಲೂ ಅಭ್ಯಾಸ ಮಾಡುತ್ತೇನೆ. ಅದರಂತೆ ಪ್ರಯತ್ನವಷ್ಟೇ ನನ್ನದು, ಫಲಾಫಲ ದೇವರದ್ದು ಎಂದು ಹೇಳುವ ಮೂಲಕ ಭಗವದ್ಗೀತೆಯನ್ನ ಪ್ಯಾರಿಸ್ ನೆಲದಲ್ಲಿ ಎತ್ತಿಹಿಡಿದಿದ್ದಾರೆ ಮನು ಭಾಕರ್.