ಮಂಡ್ಯ (ಸೆ.23): ತಮಿಳುನಾಡಿಗೆ 5 ಸಾವಿರ ಕ್ಯುಸೆಕ್ ನೀರು ಹರಿಸುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಶನಿವಾರ ಮಂಡ್ಯ ನಗರ ಹಾಗೂ ಮದ್ದೂರು ತಾಲೂಕು ಬಂದ್ಗೆ ಕರೆ ನೀಡಲಾಗಿದೆ. ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದರೂ ತಮಿಳುನಾಡಿಗೆ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಜತೆಗೆ, ಸುಪ್ರೀಂ ಕೋರ್ಟ್ ಕೂಡ ಈ ಆದೇಶವನ್ನು ಎತ್ತಿ ಹಿಡಿದಿದ್ದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಈ ಬಂದ್ಗೆ ಕರೆ ನೀಡಲಾಗಿದೆ.
ಮಂಡ್ಯ ನಗರ ಬಂದ್ಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದರೆ, ಮದ್ದೂರು ತಾಲೂಕು ಬಂದ್ಗೆ ವಿವಿಧ ಸಂಘಟನೆಗಳು ಮನವಿಮಾಡಿವೆ. ಈ ಬಂದ್ಗೆ ಈಗಾಗಲೇ ರೈತ ಸಂಘ, ಕನ್ನಡಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆ 6 ರವರೆಗೆ ಹೋಟೆಲ್, ಅಂಗಡಿಗಳು ಸೇರಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಮಂಡ್ಯ ಪ್ರತಿಭಟನೆಗೆ ಇಂದು ಎಚ್ಡಿಕೆ: ತಮಿಳುನಾಡಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ನೀರು ಹರಿಸುತ್ತಿರುವುದನ್ನು ಪ್ರತಿಭಟಿಸಿ ಮಂಡ್ಯ ಜಿಲ್ಲೆಯ ಜನರು ನಡೆಸುತ್ತಿರುವ ಬಂದ್ಗೆ ತಮ್ಮ ಬೆಂಬಲವಿದೆ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಶನಿವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ನಾನು ವಾಪಸಾಗುತ್ತೇನೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ನೇರವಾಗಿ ಮಂಡ್ಯಕ್ಕೆ ತೆರಳುತ್ತೇನೆ ಎಂದು ಹೇಳಿದ್ದಾರೆ. ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಜನರು ಹೋರಾಟಕ್ಕೆ ಮುಂದಾಗಿದ್ದಾರೆ. ಜನರ ಜತೆ ನಿಲ್ಲುವುದು ನನ್ನ ಕರ್ತವ್ಯ. ಹೀಗಾಗಿ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ.