ಬೆಂಗಳೂರು, ಜನವರಿ 05: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಕೇಸ್ಗೆ ಸಂಬಂಧಿಸಿದಂತೆ ಸರ್ಕಾರದ ಆದೇಶದ ವಿರುದ್ಧ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ. ಡಿಕೆ ಶಿವಕುಮಾರ್ನ್ನು ಲೋಕಾಯುಕ್ತ ತನಿಖೆಗೆ ವಹಿಸುವ ಸರ್ಕಾರದ ಕ್ರಮ ಪ್ರಶ್ನಿಸಿ ಇಂದು ಸಿಬಿಐ ಹೈಕೋರ್ಟ್ಗೆ ಮನವಿ ಸಲ್ಲಿಸಲಾಗಿದೆ. ಇದೇ ವೇಳೆ ಡಿಕೆ ಶಿವಕುಮಾರ್ ವಿರುದ್ಧ CBI ತನಿಖೆಗೆ ಸಮ್ಮತಿ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಯತ್ನಾಳ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೂಡ ನಡೆಯಲಿದೆ.
ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಸರ್ಕಾರ ಸಮ್ಮತಿ ನೀಡಿತ್ತು. ಸಮ್ಮತಿ ಆಧರಿಸಿ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಈಗ ಸಮ್ಮತಿ ಹಿಂಪಡೆದು ಪ್ರಕರಣ ಲೋಕಾಯುಕ್ತ ಪೊಲೀಸರ ತನಿಖೆಗೆ ನೀಡಲಾಗಿದ್ದು, ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐನಿಂದ ಅರ್ಜಿ ಸಲ್ಲಿಸಲಾಗಿದೆ. ಸಿಬಿಐ ಕೂಡ ತನ್ನ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡುವ ಸಾಧ್ಯತೆ ಇದೆ.
ಹೈಕೋರ್ಟ್ಗೆ ಸಿಬಿಐ ಅರ್ಜಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಅರ್ಜಿ ಸಲ್ಲಿಸುವುದಕ್ಕೆ ಸಿಬಿಐನವರಿಗೆ ಹಕ್ಕಿದೆ. ನಾವು ವಾದ ಮಾಡುತ್ತೇವೆ. ನ್ಯಾಯಲಯದ ಮೇಲೆ ಗೌರವ ಇದೆ. ನ್ಯಾಯಾಲಯ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.