ಬೆಂಗಳೂರು : ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಮುಂದಿನ ಜನ್ಮ ಇದ್ದರೇ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದರು. ಈಗ ಪಕ್ಷ ಉಳಿಸಲು ಬಿಜೆಪಿ ಜೊತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಬೆಂಗಳೂರಿನ ಸೂಲಿಕೆರೆ ಮೈದಾನದಲ್ಲಿ ನಡೆದ ಶಿಕ್ಷಕರ ಕೃತಜ್ಞತೆ ಸಭೆಯಲ್ಲಿ ಮಾತನಾಡಿದ ಅವರು, ಕೋಮುವಾದಿಗಳ ಜೊತೆ ಹೋಗೊಲ್ಲ. ಅವರ ವಿರುದ್ಧ ಇರುತ್ತೇವೆ, ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ ಅಂದಿದ್ದರು. ಈಗ ಪಕ್ಷ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಡಿ ಕುಮಾರಸ್ವಾಮಿಯನ್ನು ಯಾರು ಅಧಿಕಾರದಿಂದ ಇಳಿಸಿದರೂ ಅವರ ಜೊತೆಯೇ ಸೇರಿಕೊಂಡಿದ್ದಾರೆ. ದೇವೇಗೌಡರು, ಅವರ ಕುಟುಂಬದ ರಾಜಕಾರಣ ಉಳಿಯಬೇಕಾದರೆ ಏನು ಬೇಕಾದರೂ ಮಾಡುತ್ತಾರೆ. ಪಕ್ಷ ಉಳಿಸುವ ನಿಟ್ಟಿನಲ್ಲಿ ಬಿಜೆಪಿ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ನಾವು ಏನೇ ತೀರ್ಮಾನ ಮಾಡಿದರೂ ಜನ ಕಣ್ಣು ಮುಚ್ಕೊಂಡು ಬೆಂಬಲಿಸುತ್ತಾರೆ ಅಂದುಕೊಂಡಿದ್ದಾರೆ ಎಂದರು.
ನಮ್ಮ ಗೌಡರಿಗೆ ಅದೇನು ಆಗಿದ್ಯೋ ಗೊತ್ತಿಲ್ಲ. ಮೋದಿ ಗೆದ್ದರೆ ವಿದೇಶಕ್ಕೆ ಹೋಗುತ್ತೇನೆ ಅಂದಿದ್ದರು. ಈಗ ಅದೇನ್ ಹೊಗಳುವುದು, ಹಳೇ ಸಂಬಂಧ ಅಂತೆ. ನೆವರ್ ಎಕ್ಸಪೆಕ್ಟೆಡ್ ಫ್ರಾಮ್ ದೇವೇಗೌಡ. ಅವರು ಪ್ರಧಾನಿಯಾಗಿದ್ದವರು. ಈ ರೀತಿ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದರು.