ಬೆಂಗಳೂರು, ಆಗಸ್ಟ್ 27: ನಟ ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಫೋಟೊ ವೈರಲ್ ಬೆನ್ನಲ್ಲೇ ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು. ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಜನರನ್ನು ಅಮಾನತು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದು, ವರದಿ ಆಧಾರದ ಮೇಲೆ ತಪ್ಪೆಸಗಿರುವ ಇನ್ನಷ್ಟು ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್ ಜೊತೆ ಸಿಗರೇಟ್ ಮತ್ತು ಕಾಫಿ ಕಪ್ ಹಿಡಿದು ಕುಳಿತಿರುವ ಫೋಟೊವೊಂದು ಭಾನುವಾರ ಸಂಜೆಯಿಂದ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತ ಸರ್ಕಾರ 9 ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಆದರೀಗ ಈ ಪ್ರಕರನದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುವುದಾಗಿ ಪೋಲಿಸ್ ಇಲಾಖೆ ತೀರ್ಮಾನಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಇಂದು ತಿಳಿಸಿದ್ದಾರೆ.