ಮೈಸೂರು: ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆ ಅಖಾಡ ರಂಗೇರಿದೆ. ಮೈಸೂರು-ಕೊಡಗು ಕ್ಷೇತ್ರದ ಲೋಕಸಭಾ ಬಿಜೆಪಿ ಟಿಕೆಟ್ ಪ್ರತಾಪ್ ಸಿಂಹ ಕೈತಪ್ಪಿದ್ದು ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಕೈಗೆ ಸಿಕ್ಕಿದೆ. ಆದರೆ ಯದುವೀರ್ಗೆ ಟಕ್ಕರ್ ಕೊಡಲು ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕೂತುಹಲ ಮನೆ ಮಾಡಿದೆ. ಈ ನಡುವೆ ಯದುವೀರ ವಿರುದ್ಧ ಟೀಕಿಸದಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಯದುವೀರ್ ವಿರುದ್ದ ತುಟಿ ಬಿಚ್ಚಬೇಡಿ. ಬಿಜೆಪಿ ವಿರುದ್ದ ಮಾತಾಡಿ ಯದುವೀರ್ ರನ್ನು ಯಾವುದೇ ಕಾರಣಕ್ಕೂ ಟೀಕಿಸಲು ಮುಂದಾಗಬೇಡಿ. ಯದುವಂಶದ ವಿಚಾರ ಮೈಸೂರು ಭಾಗದಲ್ಲಿ ಭಾವನಾತ್ಮಕವಾಗಿದೆ. ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ನಮ್ಮ ಮಾತೇ ನಮಗೆ ಮುಳ್ಳಾಗುತ್ತೆ. ಸರ್ಕಾರದ ಗ್ಯಾರಂಟಿಗಳು, ಬಿಜೆಪಿ ಹೇಳಿರುವ ಸುಳ್ಳುಗಳ ಮೇಲೆ ಪ್ರಚಾರ ಮಾಡಿ. ಯದುವೀರ್ ವಿಚಾರಕ್ಕೆ ಅಪ್ಪಿತಪ್ಪಿಯೂ ಹೋಗಬೇಡಿ. ಯದುವೀರ್ ವಿಚಾರದಲ್ಲಿ ಟೀಕೆ ಮಾಡಿದರೆ ಅದರ ಎಫೆಕ್ಟ್ ಮೈಸೂರು ಮಾತ್ರವಲ್ಲ ಬೇರೆ ಕ್ಷೇತ್ರದ ಮೇಲೂ ಆಗುತ್ತೆ ಎಚ್ಚರ ಇರಲಿ ಎಂದು ಪಕ್ಷದ ಮುಖಂಡರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆಯ ಜೊತೆಗೆ ಕಿವಿಮಾತು ಹೇಳಿದ್ದಾರೆ.