‘ನಮ್ಮ ಸರ್ಕಾರದಲ್ಲಿ ಯಾವುದೇ ವರ್ಗಾವಣೆ ದಂಧೆ ನಡೆದಿಲ್ಲ. ನಾವು ಕೊಟ್ಟಗ್ಯಾರಂಟಿಗಳನ್ನು ಈಡೇರಿಸುತ್ತಿರುವುದರಿಂದ ರಾಜಕೀಯ ಭಯ ಹಾಗೂ ಅಭದ್ರತೆಯಿಂದ ಪ್ರತಿಪಕ್ಷಗಳ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ರಾಜಕೀಯ ಇತಿಹಾಸದಲ್ಲಿ ವರ್ಗಾವಣೆ ದಂಧೆ ನಡೆಸಿರುವುದಾಗಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗೆಗಿನ ಚರ್ಚೆಗೆ ಉತ್ತರ ನೀಡಿದ ಅವರು, ‘ನಾವು ಅಧಿಕಾರಕ್ಕೆ ಬಂದು ಎರಡು ತಿಂಗಳೂ ಆಗಿಲ್ಲ. ಆಗಲೇ 5 ಭರವಸೆಗಳಲ್ಲಿ ಮೂರು ಈಡೇರಿಸಿದ್ದೇವೆ. ಎಲ್ಲಾ ಸರ್ಕಾರಗಳಲ್ಲೂ ಸಾಮಾನ್ಯ ವರ್ಗಾವಣೆ ಸಹಜ. ಈ ಬಗ್ಗೆ ವರ್ಗಾವಣೆ ದಂಧೆ, ಭ್ರಷ್ಟಾಚಾರ ಎಂದು ಆರೋಪಿಸಿರುವ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಖಂಡ ತುಂಡವಾಗಿ ಅಲ್ಲಗೆಳೆಯುತ್ತಿದ್ದೇನೆ. ಯಾವುದೇ ಕಾರಣಕ್ಕೂ ನಮಲ್ಲಿ ವರ್ಗಾವಣೆ ದಂಧೆ ಆಗಿಲ್ಲ’ ಎಂದು ಸಮರ್ಥಿಸಿಕೊಂಡರು.