ಕೇಂದ್ರ ಸರ್ಕಾರ ಶಾಲಾ- ಕಾಲೇಜು ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಪದವನ್ನು ‘ಭಾರತ’ ಎಂದು ಬದಲಾಯಿಸಲು ಮುಂದಾಗಿರುವುದರ ಹಿಂದೆ ಚುನಾವಣಾ ಉದ್ದೇಶವಿದೆ. ಬಿಜೆಪಿಯವರು ಅಭಿವೃದ್ಧಿ ವಿಚಾರ ಬಿಟ್ಟು ಸದಾ ಇಂತಹ ವಿಷಯಗಳನ್ನಿಟ್ಟುಕೊಂಡೇ ರಾಜಕೀಯ ಮಾಡುತ್ತಿರುತ್ತಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ. ನಗರದ ರಾಜ್ಯ ಉನ್ನತ ಶಿಕ್ಷಣ ಪರಿಷತ್ನಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಶಿಕ್ಷಣ ನೀತಿ ಕರಡು ರಚನಾ ಸಮಿತಿಯ ಮೊದಲ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಲಾ ಪಠ್ಯಗಳಲ್ಲಿ ‘ಇಂಡಿಯಾ’ ಪದದ ಬದಲಿಗೆ ‘ಭಾರತ’ ಪದ ಬಳಕೆಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್ಸಿಇಆರ್ಟಿ) ವಿಶೇಷ ಸಮಿತಿಯ ಮಾಡಿರುವ ಶಿಫಾರಸು ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಕೇಂದ್ರ ಸರ್ಕಾರದ ವಿರುದ್ಧ ಮಧು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಅಭಿವೃದ್ಧಿ ಬದಲು ಬರೀ ಹೆಸರು ಬದಲಾವಣೆ ವಿಚಾರ ಮಾತನಾಡುತ್ತಾರೆ. ಇದರಲ್ಲಿ ಸ್ವಾರ್ಥವಿದೆ. ಕೇಂದ್ರದಿಂದ ಇಂತಹ ಹೆಸರು ಬದಲಾವಣೆ ಶಿಫಾರಸುಗಳು ಬಂದರೆ ಅದನ್ನು ಪರಿಗಣಿಸಬೇಕಾ? ಬೇಡವಾ? ಎಂಬುದನ್ನು ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ ಎಂದರು.