ಪ್ರವಾಸಿ ವಾಹನ ಚಾಲಕರು, ಮಾಲೀಕರಿಂದ ಪ್ರತಿಭಟನೆ
ಪ್ರತಿನಿಧಿ ವರದಿ ಮೈಸೂರು
ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕವಾಗಿ ಪ್ಯಾನಿಕ್ ಬಟನ್, ಜಿಪಿಎಸ್ ಅಳವಡಿಕೆ ಖಂಡಿಸಿ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಬಲ್ಲಾಳ್ ವೃತ್ತದ ಬಳಿ ಇರುವ ಆರ್ಟಿಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಹೊರ ರಾಜ್ಯದಲ್ಲಿ ನೋಂದಣಿ ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿ, ರಾಜ್ಯ ಬಸ್ ಮಾಲೀಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು. ಸರ್ಕಾರ ನಿಗಧಿಪಡಿಸಿರುವ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ನ ಹಣವನ್ನು ಸರ್ಕಾರವೇ ಭರಿಸಬೇಕು. ಪ್ರವಾಸಿ ವಾಹನಗಳ ತೆರಿಗೆ ಶೇ.೩೦ರಷ್ಟು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು.
ವೈಟ್ ಬೋರ್ಡ್ನಲ್ಲಿ ಪ್ರವಾಸ ಹೋಗುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವೈಟ್ ಬೋರ್ಡ್ ಸೆಲ್ಫ್ ಡ್ರೈವ್ ವಾಹನಗಳು, ಆಪ್ ಮೂಲಕ ಅಂತರಾಜ್ಯ ತೆರಿಗೆ ಕಳ್ಳರಿಗೆ ಕಠಿಣ ಶಿಕ್ಷೆ ನೀಡಬೇಕು. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ದಂಡ ತೆಗೆಯಬೇಕು. ನಮ್ಮ ಪ್ರವಾಸಿ ವಾಹನಗಳು ಪಾವತಿಸಿರುವ ಶೇ.೧೦ರಷ್ಟು ತೆರಿಗೆಯನ್ನು ನಮಗೆ ಹಿಂದಿರುಗಿಸಬೇಕು. ಹೊರ ರಾಜ್ಯದಿಂದ ನೋಂದಣಿ ಮಾಡಿಸಿ ರಾಜ್ಯದಲ್ಲಿ ಚಾಲನೆಯಲ್ಲಿರುವ ವಾಹನಗಳನ್ನು ಆರ್ಟಿಒ ಕೂಡಲೇ ವಶಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ೨೫೦ ಬಸ್ಗಳನ್ನು ಆರ್ಟಿಒ ಕಚೇರಿ ಮುಂದೆ ನಿಲ್ಲಿಸಿ ವಾಹನದ ದಾಖಲೆ, ಕೀಯನ್ನು ಆಯುಕ್ತರಿಗೆ ನೀಡುತ್ತೇವೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ಮಾಜಿ ಸಂಸದ ಪ್ರತಾಪಸಿಂಹ ಪ್ರತಿಭಟನಾಕಾರರಿಗೆ ಬಂಬಲ ಸೂಚಿಸಿದರು. ಬಳಿಕ ಆರ್ಟಿಒ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸರ್ಕಾರ ಸೂಚಿಸಿರುವ ೧೨ ಸಂಸ್ಥೆಗಳಿಂದಲೇ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಖರೀದಿಸುವ ಕ್ರಮವನ್ನು ಖಂಡಿಸಿ, ಕೂಡಲೇ ಸಮಸ್ಯೆ ಬಗೆರಿಸುವಂತೆ ಆಗ್ರಹಿಸಿದರು.
ಜಿಲ್ಲಾ ರಕ್ಷಾಧಿಕಾರಿ ಅರುಣ್ ಕುಮಾರ್, ಜಿಲ್ಲಾಧ್ಯಕ್ಷ ಸಿ.ರವಿ, ಪ್ರಧಾನ ಕಾರ್ಯದರ್ಶಿ ಕೌಶಿಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.