ಶ್ರವಣಬೆಳಗೊಳ: ಪ್ರೋ.ನಾಡೋಜ ಕಮಲಾ ಹಂಪನಾರವರ ನಿಧನಕ್ಕೆ ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಸಂತಾಪ ಸೂಚಿಸಿದ್ದಾರೆ.
ಕಮಲಾ ಹಂಪನಾರವರು ಲೇಖಕರು, ವಿದ್ವಾಂಸರು, ಪ್ರಾಧ್ಯಾಪಕರಾಗಿ, ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಹಾಗೂ ಅಖಿಲ ಭಾರತ ಹಾಗೂ ರಾಜ್ಯಮಟ್ಟದ ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧಕರಾಗಿ, ಅಧ್ಯಕ್ಷರಾಗಿ, ಉದ್ಘಾಟಕರಾಗಿ ಭಾಗವಹಿಸಿ ಪ್ರಬಂಧ ಮಂಡನೆ ಮಾಡಿದ್ದು, ೬೦ ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ಬಾಬಾ ಆಮ್ಟೆ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರು ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ನೀಡುವಂತೆ ಮೊದಲೇ ತಿಳಿಸಿದ್ದು, ಅವರ ಮಾನವೀಯತೆಯನ್ನು ತೋರಿಸುತ್ತದೆ.
ಪ್ರೊ. ಕಮಲಾ ಹಂಪನಾರವರ ನಿಧನದಿಂದ ಅವರ ಕುಟುಂಬ, ಸಮಾಜ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಮುಂದೆ ಅವರಿಗೆ ಮೋಕ್ಷ ಪ್ರಾಪ್ತಿಯಾಗಲೆಂದು ಹಾಗೂ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಗೊಮ್ಮಟೇಶ್ವರ ಭಗವಾನ್ ಶ್ರೀ ಶ್ರೀ ಶ್ರೀ ಬಾಹುಬಲಿ ಸ್ವಾಮಿಯವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.