ಟಿ.ನರಸೀಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಪ್ರಚಾರ ನಡೆಸಿ, ಜನರಲ್ಲಿ ಮತ ಯಾಚಿಸಿದರು. ಇಂದು ತಾಲ್ಲೂಕಿನ ಸೋಸಲೆ, ಬೆನಕನಹಳ್ಳಿ, ಮುತ್ತಲವಾಡಿ, ದೊಡ್ಡ ಬಾಗಿಲು, ಕೊಳತ್ತೂರು, ಚಿದರವಳ್ಳಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು ಹಾಗೂ ಮುಖಂಡರ ಜೊತೆ ಗ್ರಾಮದ ಜನರನ್ನು ಭೇಟಿ ಮಾಡಿ ತಮಗೆ ಮತ ಹಾಕುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಸುನೀಲ್ ಬೋಸ್ , ತಂದೆಯವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಈ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ನನಗೂ ಇಷ್ಟು ದಿನ ಕ್ಷೇತ್ರದೆಲ್ಲೆಡೆ ಹೆಚ್ಚಿನ ಪ್ರೀತಿ, ವಿಶ್ವಾಸ ತೋರಿಸಿದ್ದೀರಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ತಂದೆಗೆ ನೀಡಿದ್ದ ಮತಕ್ಕಿಂತ ಹೆಚ್ಚಿನ ಮತ ನನಗೆ ನೀಡಿ ಗೆಲ್ಲಿಸಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.