ಬೆಂಗಳೂರು: ಮಾಜಿ ಸಚಿವ ಸಿಪಿ ಯೋಗೇಶ್ವರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ದೋಸ್ತಿ ನಾಯಕರಿಗೆ ಸೆಡ್ಡು ಹೊಡೆದಿರುವ ಸಿ.ಪಿ.ವೈ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿದರು. ಸಿಪಿ ಯೋಗೇಶ್ವರ್ ಗೆ ಪಕ್ಷದ ಬಾವುಟ ನೀಡಿ, ಶಾಲು ಹೊದಿಸುವ ಮೂಲಕ ಡಿಕೆ ಶಿವಕುಮಾರ್ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಮೂರನೇ ಬಾರಿ ಕಾಂಗ್ರೆಸ್ ಗೆ ಮರಳಿರುವ ಯೋಗೇಶ್ವರ್. ನಾಳೆ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ ಪಿ ಯೋಗೇಶ್ವರ್. ಕಳೆದೆರಡು ದಿನಗಳ ಹಿಂದಷ್ಟೇ ಬಿಜೆಪಿಯ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉಪ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯಲು ಉತ್ಸುಕವಾಗಿದ್ದ ಯೋಗೇಶ್ವರ್ ಗೆ ಮೈತ್ರಿ ಧರ್ಮ ಅಡ್ಡಲಾಗಿ ನಿಂತಿತ್ತು. ಪರಿಣಾಮ ಬಿಜೆಪಿ ತೊರೆದು ಇಂದು ಬೆಂಗಳೂರಿನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಜೊತೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡುವ ಮೂಲಕ ಕಾಂಗ್ರೆಸ್ ನತ್ತ ಸಿಪಿವೈ ಮುಖ ಮಾಡಿದ್ದಾರೆ. ಅಲ್ಲದೆ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸಿಪಿ ಯೋಗೇಶ್ವರ್ ಕಣಕ್ಕಿಳಿಯಲಿದ್ದಾರೆ.
ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಯೋಗೇಶ್ವರ್ ರಾಜಕಾರಣ ಆರಂಭವಾಗಿದ್ದೇ ಕಾಂಗ್ರೆಸ್ ನಿಂದ, ಯಾವುದೇ ಷರತ್ತು ಹಾಕದೇ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ. ಎಲ್ಲಾ ನಾಯಕರ ಜೊತೆ ಚರ್ಚಿಸಿ ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದೇವೆ. ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಸಿಪಿವೈಗೆ ಸ್ವಾಗತ. ಪಕ್ಷದ ಸಿದ್ದಾಂತಗಳನ್ನ ಒಪ್ಪಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಯೋಗೇಶ್ವರ್ ಮರಳಿ ತಮ್ಮ ಗೂಡಿಗೆ ಬಂದಿದ್ದಾರೆ. ಹಿಂದೆ ಕೆಲವರು ಬಿಜೆಪಿಗೆ ಹೋಗಿದ್ದರು. ಈಗ ಮತ್ತೆ ಕಾಂಗ್ರೆಸ್ ಗೆ ಬರ್ತಿದ್ದಾರೆ ಎಂದರು.