– ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಪ್ರತಿನಿಧಿ ವರದಿ ಮೈಸೂರು
ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಸಿದ್ದಾರ್ಥ ಬಡಾವಣೆಯ ಟೆರೇಷಿಯನ್ ಕಾಲೇಜು ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಪರಿಶಿಷ್ಟರ ಮೀಸಲಾತಿ ಪರಿಶಿಷ್ಟ ಜನಾಂಗದ 101 ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ ಎಂಬ ಆತಂಕ ಹಾಗೂ ಅಸಹನೆಯಿಂದ 30 ದಶಕಗಳಿಂದ ರಾಜ್ಯಾದ್ಯಂತ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕಾಗಿ ಕರ್ನಾಟಕ, ಆಂಧ್ರ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಹೋರಾಟಗಳ ಹಿನ್ನೆಲೆಯಲ್ಲಿ ಹಲವು ರಾಜ್ಯ ಸರ್ಕಾರಗಳು ರಚಿಸಿದ ಆಯೋಗಗಳ ವರದಿ ಪರಿಶೀಲಿಸಿದ ಸುಪ್ರೀಂಕೋರ್ಟ್ನ ಏಳು ನ್ಯಾಯಾಧೀಶರ ಸಂವಿಧಾನ ಪೀಠ ಆ.1ರಂದು ಐತಿಹಾಸಿಕ ತೀರ್ಪು ನೀಡಿ ವಿವಾದಕ್ಕೆ ತೆರೆ ಎಳೆದಿದೆ. ಈ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೇ 2023-24 ಹಾಗೂ 2024-25ನೇ ಸಾಲಿನಲ್ಲಿ 25,391 ಕೋಟಿ ಎಸ್ಸಿಪಿ, ಟಿಎಸ್ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಈ ಸಮಾಜದ ಅಭಿವೃದ್ಧಿಗೆ ವಾಪಸ್ ನೀಡಲಿ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸ್ಥಗಿತ ಮಾಡಲಾಗಿದೆ. ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶ ವ್ಯಾಸಂಗದ ಯೋಜನೆಯನ್ನು ಕೂಡಲೇ ಪುನರಾರಂಭಿಸಬೇಕು. ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಆಗುವವರೆಗೂ ಸರ್ಕಾರ ಎಲ್ಲ ಸರ್ಕಾರಿ ನೇಮಕಾತಿ ಸ್ಥಗಿತಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ, ಜಿಲ್ಲಾದ್ಯಕ್ಷ ಶಂಕರ್, ಮೈಸೂರು ತಾಲೂಕು ಅಧ್ಯಕ್ಷ ಸ್ವಾಮಿ, ತಿ.ನರಸೀಪುರ ತಾಲೂಕು ಅಧ್ಯಕ್ಷ ಬಲ್ಲಯ್ಯ, ರವೀಶ್, ಸಿದ್ದಪ್ಪ, ಗಿರೀಶ್ ಕುಮಾರ್ ಇತರರಿದ್ದರು.
==================