- ತರಕಾರಿ ಮಂಡಿ ಮಾಲೀಕರಿಂದ ಮನವಿ ಪತ್ರ ಸಲ್ಲಿಕೆ
- ಜೆ.ಎನ್.ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಂದ ಧರಣಿ
ಪ್ರತಿನಿಧಿ ವರದಿ ಕೋಲಾರ
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ವಿಜಯಲಕ್ಷ್ಮಿಅವರ ಭ್ರಷ್ಟಾಚಾರದ ವಿರುದ್ದ ದೂರು ನೀಡಿ 50 ದಿನ ಕಳೆದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಎಪಿಎಂಸಿ ಕಚೇರಿ ಎದುರು ಶುಕ್ರವಾರ ಜೆ.ಎನ್.ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಧರಣಿ ನಡೆಸಿ ಎಪಿಎಂಸಿ ಸಹಾಯಕ ನಿರ್ದೇಶಕ ರವಿಕುಮಾರ್ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.
ಮಂಡಿ ಮಾಲೀಕ ಜಿ.ಬಿ.ಆರ್ ಸತೀಶ್ ಮಾತನಾಡಿ, ಎಪಿಎಂಸಿಯಲ್ಲಿ ರೈತರು, ಮಂಡಿ ಮಾಲೀಕರು ಹಾಗೂ ದಲ್ಲಾಳಿಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ಆಗಬೇಕಾದರೂ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರಿಗೆ ಲಂಚ ನೀಡಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಲಂಚದ ದಾಖಲೆಗಳು ಸಹ ಇದ್ದು, ಈ ವ್ಯವಸ್ಥೆಗೆ ಕಡಿವಾಣ ಹಾಕಬೇಕೆಂದು ಸಂಬಂಧಿಸಿದಂತೆ ಅಧಿಕಾರಿಗಳಿಗೆ ದೂರು ನೀಡಿದೆ. ಆದರೆ ಅಧಿಕಾರಿಗಳು ಬಂದು ಕಚೇರಿಯಲ್ಲಿ ಪರಿಶೀಲನೆ ನಡೆಸಿದರೆ ಹೊರತು ಯಾವುದೇ ಕ್ರಮ ಕೈ ಗೋಂಡಿಲ ಎಂದು ದೂರಿದರು.
ಸಂಘದ ಮುಖಂಡ ಎಪಿಎಂಸಿ ಪುಟ್ಟುರಾಜು ಮಾತನಾಡಿ, ಎಪಿಎಂಸಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರು ನೀಡಿದ ಪರಿಣಾಮವಾಗಿ ಯಾವುದೇ ಕೆಲಸ ಆಗಬೇಕಾದರೆ ದೂರಿನ ನೆಪದಲ್ಲಿ ನಮ್ಮಗಳ ಮೇಲೆ ವಿನಾಕಾರಣ ಕಿರುಕುಳ ನೀಡುತ್ತಾರೆ. ಸರಕಾರ ನಿಗಧಿ ಪಡಿಸಿದ ಧರಕ್ಕಿಂತ ಹೆಚ್ಚಿನ ಹಣವನ್ನು ಅಧಿಕಾರಿಗಳಿಗೆ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ದಾಖಲೆ ಸಮೇತವಾಗಿ ಮೇಲಿನ ಅಧಿಕಾರಿಗಳಿಗೆ ಕೊಟ್ಟರು ಇಂತಹ ಭ್ರಷ್ಟ ಅಧಿಕಾರಿಯನ್ನು ಇನ್ನೂ ಇಲ್ಲೇ ಉಳಿಸಿಕೊಂಡು ಇದ್ದಾರೆ ಎಂದರು.
ನಮ್ಮಲ್ಲಿ ದಲ್ಲಾಳರ ಪರವಾನಗಿ ಪಡೆಯಲು 20 ಸಾವಿರದಿಂದ 40 ಸಾವಿರದಷ್ಟು ಹಣ. ಜತೆಗೆ ವ್ಯಕ್ತಿಗೆ ಅನುಗುಣವಾಗಿ ಲಂಚ ಕೊಡಬೇಕು. ಕೊಡದೇ ಹೋದರೆ ಯಾವುದೇ ಕೆಲಸವು ಮಾಡಿಕೊಡುವುದಿಲ್ಲ ಎಂದು ನೇರವಾಗಿ ಹೇಳುತ್ತಾರೆ. ಎಪಿಎಂಸಿ ಆವರಣದ ಒಳಗಡೆ ಜಾಗದ ಸಮಸ್ಯೆಯಿಂದ ಸುಮಾರು 63 ಜನ ತರಕಾರಿ ಮಂಡಿ ಮಾಲೀಕರು ನಮ್ಮ ಫೆಡರೇಶನ್ ಜಾಗದಲ್ಲಿ ಇದ್ದು ಅದಕ್ಕೆ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರೂ, ಆ ಜಾಗದಲ್ಲಿ ಅಭಿವೃದ್ಧಿ ಮಾಡಲು ಅವಕಾಶವಿಲ್ಲ ಎಂದವರು ನಾವು ಮಾಡಿದ ಅಭಿವೃದ್ಧಿಗೆ ಇಲಾಖೆಯ ಕಡೆಯಿಂದ ಕಾಮಗಾರಿಗಳಿಗೆ ಬಿಲ್ ಮಾಡಿಕೊಂಡಿದ್ದಾರೆ. ಎಪಿಎಂಸಿಯ ಅಭಿವೃದ್ಧಿ ಕೆಲಸಗಳು ಬಗ್ಗೆ ಮಾಹಿತಿ ಪಡೆದು ತನಿಖೆ ಮಾಡಿಸಿದರೆ ಇನ್ನಷ್ಟು ಸತ್ಯ ಬಯಲಿಗೆ ಬರಲಿದೆ ಎಂದು ಒತ್ತಾಯಿಸಿದರು.
ಜೆ.ಎನ್.ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರೇಶ್ ಮಾತನಾಡಿ, ಎಪಿಎಂಸಿ ಭ್ರಷ್ಟಾಚಾರದ ಬಗ್ಗೆ ಮೇಲಿನ ಅಧಿಕಾರಿಗಳು ಎಚ್ಚತ್ತುಕೊಂಡು ಕಾರ್ಯದರ್ಶಿ ವಿಜಯಲಕ್ಷ್ಮಿ ಅವರನ್ನು ವಜಾಗೊಳಿಸಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಎಲ್ಲಾ ಮಂಡಿ ಮಾಲೀಕರು, ವ್ಯಾಪಾರಸ್ಥರು ಹಾಗೂ ಕೂಲಿ ಕಾರ್ಮಿಕರು ತಮ್ಮ ವೈವಾಟನ್ನು ಸ್ಥಗಿತಗೊಳಿಸಿ ಎಪಿಎಂಸಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವೆಂಕಟೇಗೌಡ, ಖಜಾಂಚಿ ನಾಗೇಶ್, ಉಪಾಧ್ಯಕ್ಷ ಗೋಪಾಲಕೃಷ್ಣ, ಪದಾಧಿಕಾರಿಗಳಾದ ವೆಂಕಟರಾಮ್, ವೆಂಕಟೇಶ್, ಮುನಿರಾಜು, ಮಂಜುನಾಥರೆಡ್ಡಿ, ಶ್ರೀನಿವಾಸ್, ರೆಡ್ಡೆಪ್ಪ, ನವೀನ್ ಮುಂತಾದವರು ಇದ್ದರು.