ಬೆಂಗಳೂರು, (ಅಕ್ಟೋಬರ್ 19): ಬೆಳಗಾವಿ (Belagavi) ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಸತೀಶ್ ಜಾರಕಿಹೊಳಿ (Satish Jarkiholi) ಅಸಮಾಧಾನ ಮಧ್ಯೆಯೂ ಬೆಳಗಾವಿಗೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಭೇಟಿ ನೀಡಿದ್ದರು. ಆದ್ರೆ, ನಿರೀಕ್ಷೆಯಂತೆ ಡಿಸಿಎಂ ಡಿಕೆ ಜಿಲ್ಲಾ ಪ್ರವಾಸ ವೇಳೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗೈರಾಗಿದ್ದರು. ಡಿಕೆ ಶಿವಕುಮಾರ್ ಅವರಿಗೆ ಸತೀಶ್ ಜಾರಕಿಹೊಳಿ ಮೊದಲೇ ತಿಳಿಸಿದ್ರಾ? ಅಷ್ಟಕ್ಕೂ ಸತೀಶ್ ಜಾರಕಿಹೊಳಿ ಗೈರಾಗಿರುವುದ್ಯಾಕೆ? ಈ ಬಗ್ಗೆ ಸ್ವತಃ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿ ಎಲ್ಲಾ ಗೊಂದಲಗಳಿಗೆ ತೆರಳಿದಿದ್ದಾರೆ.
ಈ ಬಗ್ಗೆ ಇಂದು (ಅಕ್ಟೋಬರ್ 19) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬೆಳಗಾವಿಯಲ್ಲಿ ಇರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ಗೆ ಒಂದು ದಿನ ಮುಂಚಿತವಾಗಿಯೇ ನಾನು ಹೇಳಿದ್ದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ದ್ದು ಖಾಸಗಿ ಕಾರ್ಯಕ್ರಮ ಆಗಿತ್ತು. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕೂಡ ಪ್ರವಾಸ ಹೋಗಿದ್ದರು. ಹೀಗಾಗಿ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.