ಬೆಂಗಳೂರು ಅ.13: ಬಾಕಿ ಇವರು ಬಿಲ್ ಬಿಡುಗಡೆಗೆ 40 ಪರ್ಸೆಂಟೇಜ್ ಕಮೀಷನ್ ಕೇಳುತ್ತಿದ್ದಾರೆ ಎಂದು ಕಳೆದ ಬಿಜೆಪಿ ಸರ್ಕಾರದ ಮೇಲೆ ರಾಜ್ಯ ಗುತ್ತಿಗೆದಾರರ (Contractors Association) ಸಂಘವು ಆರೋಪ ಮಾಡಿತ್ತು. ಇದು ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಈ ವಿಚಾರವಾಗಿ ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದರು. ನಂತರ ಕಾಂಗ್ರೆಸ್ ಆಡಳಿತಕ್ಕೆ ಬಂದಿದ್ದು, ಬಾಕಿ ಇರುವ ಬಿಲ್ ಅನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ (Siddaramaiah) ಹಲವು ಬಾರಿ ಮನವಿ ಸಲ್ಲಿಸಿದ್ದರು. ಮನವಿಗೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಸಂಘವು ಸಿಡಿದೆದ್ದಿದೆ. ಇಂದು (ಅ.13) ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಸುದ್ದಿಗೋಷ್ಠಿ ನಡೆಸಿ, ಬಾಕಿ ಬಿಲ್ ನೀಡುವಂತೆ 30 ದಿನ ಗಡುವು ನೀಡಿದ್ದಾರೆ.
ಬಾಕಿ ಬಿಲ್ ಪಾವತಿಸುವಂತೆ ನಾಲ್ಕು ನಾಲ್ಕು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಅದರೆ ಇದುವರೆಗೆ ಪಾವತಿ ಮಾಡಿಲ್ಲ. ರಾಜ್ಯ ಸರ್ಕಾರದಿಂದ ಇನ್ನೂ 20 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳಿಂದ ಬಾಕಿ ಬರಬೇಕು. ಇಂದಿನಿಂದ ಸರ್ಕಾರಕ್ಕೆ 30 ದಿನ ಗಡವು ನೀಡುವುತ್ತೇವೆ. ಕರೆದು ಮಾತನಾಡಿ ಬಗೆ ಹರಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರ ಎಚ್ಚರಿಕೆ ನೀಡಿದರು.
ಹಳೇ ಸಮಸ್ಯೆಗಳ ಜೊತೆ ಹೊಸ ಸಮಸ್ಯೆ ಸಹ ಸೇರ್ಪಡೆಯಾಗಿದೆ. ತನಿಖೆ ಹೆಸರಲ್ಲಿ ರಾಜ್ಯ ಸರ್ಕಾರ ಬಾಕಿ ಹಣ ತಡೆಹಿಡಿದಿದೆ. ಕೆಲವು ಇಲಾಖೆಗಳಲ್ಲಿ ಶೇಕಡಾ 7ರಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಒಂದು ತಿಂಗಳಲ್ಲಿ ಶೇ.50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು. ತಮಗೆ ಬೇಕಾದ ಕೆಲ ಗುತ್ತಿಗೆದಾರರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ಕೇಳಿದರೇ ಗೊತ್ತಿಲ್ಲ ಅಂತಾ ಇಂಜಿನಿಯರ್ಗಳು ಹೇಳುತ್ತಿದ್ದಾರೆ. ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡದಿದ್ದರೇ ಪ್ರತಿಭಟನೆ ಮಾಡುತ್ತೇವೆ. ಈ ಬಗ್ಗೆ ಸಿಎಂ ಅವರಿಗೆ ಪತ್ರ ಬರೆಯುತ್ತೇವೆ, ಪ್ರಧಾನ ಮಂತ್ರಿಗೂ ಪತ್ರ ಬರೆಯುತ್ತೇವೆ ಎಂದರು.