ಮೈಸೂರು: ಮೈಸೂರಿನ ಮಾನಸಗಂಗೋತ್ರಿಯ ಆಯುಷ್ ಇಲಾಖೆಯ ಸಭಾಂಗಣದಲ್ಲಿ ಇಂದು ಕೇಂದ್ರ ಸರ್ಕಾರದ ರೋಜ್ ಗಾರ್ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಆನ್ ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರ ಮೋದಿ, ಬಟನ್ ಒತ್ತುವ ಮೂಲಕ ರೋಜ್ ಗಾರ್ ಮೇಳಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಕೇಂದ್ರ ಸಚಿವ ವಿ ಸೋಮಣ್ಣ ವೇದಿಕೆಯ ಜ್ಯೋತಿ ಬೆಳಗಿಸಿ, ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಆಯ್ಕೆಯಾದ 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಮಾಡಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಂಸದ ಪ್ರತಾಪ್ ಸಿಂಹರನ್ನು ಹಾಡಿ ಹೊಗಳಿದ್ದಾರೆ. ಹಾಲಿ ಸಂಸದ ಯದುವೀರ್ ಸಮ್ಮುಖದಲ್ಲಿ ಮಾಜಿ ಪ್ರತಾಪ್ ಸಿಂಹ ಅವರ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸುವ ಮೂಲಕ ಗುಣಗಾನ ಮಾಡಿದರಲ್ಲದೆ, ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಸಂಸದ ಯದುವೀರ್ ಗೆ ಕಿವಿಮಾತು ಹೇಳಿದರು. ಇಂತಹ ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಮಯವನ್ನು ಸರಿದೂಗಿಸಿಕೊಳ್ಳಬೇಕು ಎಂದು ವಿ ಸೋಮಣ್ಣ ಸಲಹೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಎಂ ಪುಷ್ಪವತಿ ಮಾತನಾಡಿ, ಮೈಸೂರಿನ ಆಯುಷ್ ನಲ್ಲಿ14 ಅಕಾಡೆಮಿಕ್ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿ ಲಭ್ಯವಿರುವ ಕೇಂದ್ರ ಸರ್ಕಾರದ ಯೋಜನೆಯ ಸೌಲಭ್ಯಗಳನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕು. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ದೇಶದ ಅತಿದೊಡ್ಡ ಪ್ರತಿಷ್ಠಿತ ಸಂಸ್ಥೆ ಆಗಿದೆ. ಜನಸಾಮಾನ್ಯರಿಗೆ ಹೊರೆಯಾಗದ ರೀತಿ ಅಗತ್ಯ ಸೇವೆಗಳನ್ನು ನೀಡಲಾಗುತ್ತಿದೆ. ಇದರ ಉಪಯೋಗವನ್ನು ಜನರು ಪಡೆದುಕೊಳ್ಳಬೇಕು. ಆಯುಷ್ ಇಲಾಖೆಯ ನಿರ್ದೇಶಕಿ ಎಂ ಪುಷ್ಪವತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಶ್ರೀವತ್ಸ, ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ್ ಕಾಕಮಾನ್, ಡೈರೆಕ್ಟರ್ ಪೋಸ್ಟಲ್ ಮಾಸ್ಟರ್ ಸಂದೇಶ್ ಮಹದೇವಪ್ಪ, ರೈಲ್ವೆ ಇಲಾಖೆಯ ಡಿ ಆರ್ ಎಮ್ ಶಿಲ್ಪಿ ಅಗರವಾಲ್ ಭಾಗಿಯಾಗಿದ್ದರು.