ಚಿಕ್ಕಮಗಳೂರು : ಲೋಕಸಭೆ ಚುನಾವಣೆ ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ಏನೂ ಮಾತನಾಡುವುದಿಲ್ಲ. ಇಡೀ ರಾಜ್ಯದ ಬಗ್ಗೆ ಮಾತನಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಶೃಂಗೇರಿಯಲ್ಲಿ ಮಾತನಾಡಿದ ಅವರು, ನಾನು ರಾಜ್ಯದ ವಿಚಾರ ಮಾತನಾಡುತ್ತೇನೆ, ಗ್ರಾಮಾಂತರದ ಬಗ್ಗೆ ಮಾತಾಡುವುದಿಲ್ಲ. ಗ್ರಾಮಾಂತರದಲ್ಲಿ ದೇವೇಗೌಡರ ಸೊಸೆ ಇದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ ಎಂದರು.
ಪ್ರತಿ ಪಂಚಾಯಿತಿಗೆ ಸದಸ್ಯನಾಗಿದ್ದಂತೆ ಸುರೇಶ್ ಸೇವೆ ಮಾಡುತ್ತಿದ್ದಾರೆ. ಸುರೇಶ್ ಬಗ್ಗೆ ಕ್ಷೇತ್ರದ ಪ್ರತಿ ಮನೆಗೂ ಗೊತ್ತು. ಜನ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.
ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹಾಕುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅದು ಅವರ ಪಕ್ಷದ ವಿಚಾರ. ಅವರ ಆಯ್ಕೆ. ಮಂಡ್ಯ, ಬೆಂಗಳೂರು, ಗ್ರಾಮಾಂತರ ಚಿಕ್ಕಬಳ್ಳಾಪುರ ಹಾಸನ ಎಲ್ಲಿಯಾದರೂ ಸ್ಪರ್ಧೆ ಮಾಡಲಿ. 2 ಪಾರ್ಟಿ ಸೇರಿ ತೀರ್ಮಾನ ಮಾಡಿದ್ದಾರೆ. ಅವರಿಗೆ ಅನುಕೂಲವಾಗುವ ಕಡೆ ನಿಲ್ಲಲಿ. ಈಗ ನಾವ್ಯಾಕೆ ಅದರ ಬಗ್ಗೆ ಮಾತನಾಡಬೇಕು. ಮೊದಲಿಂದ ನಾವು ಹೇಗೆ ನಡೆದುಕೊಂಡಿರುತ್ತೇಯೋ ಅದರ ಆಧಾರದ ಮೇಲೆ ಜನ ತೀರ್ಮಾನ ಮಾಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.