ಪಾಕಿಸ್ತಾನ: ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಇಂದು ಮತ್ತು ನಾಳೆ 2 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (ಸಿಎಚ್ಜಿ) 23 ನೇ ಸಭೆ ಮಂಗಳವಾರ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಮತ್ತು ಅದರ ನೆರೆಯ ನಗರವಾದ ರಾವಲ್ಪಿಂಡಿಯಲ್ಲಿನ ಪ್ರಮುಖ ಮಾರ್ಗಗಳು ಮತ್ತು ವ್ಯವಹಾರಗಳನ್ನು ಭದ್ರತಾ ಕಾರಣಗಳಿಂದ ಮುಚ್ಚಲಾಗಿದ್ದು, ಲಾಕ್ಡೌನ್ ಮಾಡಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿರುವ ಸರ್ಕಾರ, ಮದುವೆ ಶುಭಸಮಾರಂಭಗಳ ಮೇಲೆಯೂ ಬ್ರೇಕ್ ಹಾಕಿದೆ. ಬೇರೆ ದೇಶಗಳಿಂದ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಇತರೆ ದೇಶದ ಹಲವು ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಪಾಕಿಸ್ತಾನ ಸೇನೆಯ ಸುಮಾರು 10,000 ಸೈನಿಕರು ಮತ್ತು ಕಮಾಂಡೋಗಳನ್ನು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಈಗ ನೇರವಾಗಿ ಮಿಲಿಟರಿಯಿಂದ ಆದೇಶಗಳನ್ನು ಪಡೆದುಕೊಳ್ಳುತ್ತಿದೆ.
ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮಿಲಿಟರಿ ನಿಯಂತ್ರಣದಲ್ಲಿ ಭದ್ರತೆಯನ್ನು ಇರಿಸಲು ಪಾಕಿಸ್ತಾನದ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 12 ರಿಂದ 16 ರವರೆಗೆ ಎರಡೂ ನಗರಗಳಲ್ಲಿ ಮದುವೆ ಹಾಲ್ಗಳು, ಕೆಫೆಗಳು, ರೆಸ್ಟೋರೆಂಟ್ಗಳು ಮತ್ತು ಸ್ನೂಕರ್ ಕ್ಲಬ್ಗಳನ್ನು ಮುಚ್ಚಲು ಆದೇಶಿಸಲಾಗಿದೆ. ವ್ಯಾಪಾರಸ್ಥರು ಹಾಗೂ ಹೊಟೇಲ್ ಮಾಲೀಕರು ಇದನ್ನು ಪಾಲಿಸದಿದ್ದರೆ ಕಾನೂನು ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಲಾಗಿದೆ. ಇನ್ನು ಅಕ್ಟೋಬರ್ 14 ಮತ್ತು 16 ರಂದು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.