ಬೆಂಗಳೂರು: ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ಶೀಘ್ರದಲ್ಲೇ ಸನ್ನಿಹಿತವಾಗಲಿದೆ. ಟೆಸ್ಟಿಂಗ್ ಕಾರ್ಯಗಳು ಈಗಾಗಲೇ ಆರಂಭವಾಗಿದ್ದು, ಸಿಗ್ನಲಿಂಗ್ ಟೆಸ್ಟ್ ಪ್ರಕ್ರಿಯೆಗಳು ಜೂನ್ 7ರಿಂದ ಶುರುವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಸಿಗ್ನಲಿಂಗ್ ಟೆಸ್ಟ್, ಸಿಗ್ನಲ್ ಮತ್ತು ರೈಲಿನ ಸಂಯೋಜನೆ ಪರೀಕ್ಷೆಗಳು ಚಾಲಕ ರಹಿತ ರೈಲಿನ ಮುಖ್ಯ ಪರೀಕ್ಷೆಯ ಭಾಗವಾಗಿದೆ ಎಂದು ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಡಿಸೆಂಬರ್ನಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ 20 ನಿಮಿಷಗಳಿಗೊಮ್ಮೆ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ನಡೆಸಲು ಬಿಎಂಆರ್ಸಿಎಲ್ ಯೋಜನೆ ರೂಪಿಸುತ್ತಿದೆ. ಮೊದಲಿಗೆ ಒಟ್ಟು 57 ಏಕಮುಖ ಸಂಚಾರ ಮತ್ತು ನಂತರದಲ್ಲಿ ದ್ವಿಮುಖ ಸಂಚಾರಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ. ಇದಕ್ಕಾಗಿ 18.82 ಕಿಮೀ ಎತ್ತರದ ಮಾರ್ಗದಲ್ಲಿ ಮತ್ತು ಅದರಲ್ಲಿ ಬರುವ ಎಲ್ಲಾ 16 ನಿಲ್ದಾಣಗಳಲ್ಲಿ ಮೂಲಸೌಕರ್ಯಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಚೀನಾದ ಸಂಸ್ಥೆಯಾದ ಸಿಆರ್ಆರ್ಸಿ ನಾನ್ಜಿಂಗ್ ಪುಜೆನ್ನಿಂದ ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ರೈಲುಗಳ ಪೂರೈಕೆಯಲ್ಲಿ ವಿಳಂಬದಿಂದಾಗಿ ಬಹುನಿರೀಕ್ಷಿತ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ಆರಂಭ ಮುಂದೂಡಿಕೆಯಾಗುತ್ತಿದೆ.