ಮೈಸೂರು: ಮುಡಾದಲ್ಲಿ ನಡೆದಿದೆ ಎನ್ನಲಾಗುವ ಅಕ್ರಮ ಕುರಿತಂತೆ ಇದೀಗ ತಪ್ಪಿತಸ್ಥರ ಪತ್ತೆಗೆ ಇಡಿಯಿಂದ ಸ್ಪೆಷಲ್ ಸಾಫ್ಟ್ವೇರ್ ಬಳಕೆ ಮಾಡಲಾಗುತ್ತಿದೆ. ಅಕ್ರಮ ಎಸಗಿರುವ ರಾಜಕಾರಣಿಗಳು, ಅಧಿಕಾರಿಗಳ ಜಾಡು ಹಿಡಿಯುವ ಸಲುವಾಗಿ ಇಡಿ ಅಧಿಕಾರಿಗಳು ಸ್ಪೆಷಲ್ ಸಾಫ್ಟ್ವೇರ್ ಮೊರೆ ಹೋಗಿದ್ದಾರೆ.
5 ರಿಂದ 6 ಸಾವಿರ ನಿವೇಶನಗಳ ಡಿಜಿಟಲೈಸ್ ರೆಕಾರ್ಡ್ ಗಳು, ಮತ್ತು 8 ಸಾವಿರ ದಾಖಲಾತಿ ಪುಟಗಳನ್ನು ಆಧರಿಸಿ ತನಿಖೆ ಕೈಗೊಂಡಿರುವ ಇಡಿ ಅಧಿಕಾರಿಗಳು, ಮುಡಾ ಅಕ್ರಮದ ಫಲಾನುಭವಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಎರಡು ದಿನಗಳ ಇಡಿ ದಾಳಿ ವೇಳೆ 8000 ಪುಟಗಳ ದಾಖಲೆ ವಶಪಡಿಸಿಕೊಳ್ಳಲಾಗಿತ್ತು. ಇದೀಗ 2020ರಿಂದ ಈಚೆಗೆ ನೋಂದಣಿ ಆಗಿರುವ ಆಸ್ತಿಗಳನ್ನು ಪತ್ತೆ ಹಚುವ ಸಲುವಾಗಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿರುವ ಆಸ್ತಿಗಳ ಮೇಲೆ ಕಣ್ಣು ಇಟ್ಟಿದ್ದಾರೆ ಇಡಿ ಅಧಿಕಾರಿಗಳು. ಮೊಬೈಲ್ ನಂಬರ್, ಆಧಾರ್ ನಂಬರ್ ಗಳ ಮೂಲಕ ಪತ್ತೆ ಕಾರ್ಯ ಪ್ರಾರಂಬಿಸಿದ್ದು, ರಾಜಕಾರಣಿಗಳು, ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ನೌಕರರು ಹಾಗು ಕುಟುಂಬಸ್ಥರ ಎದೆಯಲ್ಲಿ ಢವ- ಢವ ಶುರುವಾಗಿದೆ.
ಆಪ್ತರು, ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿಕೊಂಡಿರುವವರ ಪತ್ತೆ ಕಾರ್ಯ ಕೂಡ ಮಾಡಲಿದ್ದು, ದಾಖಲಾತಿಗಳ ಮೂಲಕ ವಂಶವೃಕ್ಷ ಕೂಡ ಶೋಧ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಯಾರ ಹೆಸರಿನಲ್ಲಿ ಸ್ಥಿರಾಸ್ತಿ ನೋಂದಣಿಯಾಗಿದೆ, ನಿವೇಶನಗಳ ಖರೀದಿ, ಹಣಕಾಸು ವ್ಯವಹಾರ, ಮಾರಾಟ, ವರ್ಗಾವಣೆ ಕುರಿತು ಶೋಧ ಮಾಡಲಿರುವ ಇಡಿ ತಂಡ ಅಕ್ರಮ ಎಸಗಿರುವವರನ್ನು ಬೇರಿನ ಸಮೇತ ಕಂಡು ಹಿಡಿಯಲು ಮುಂದಾಗಿದೆ.
ಮುಡಾದ ಮಾಜಿ ಅಧ್ಯಕ್ಷರು, ಮಾಜಿ ಹಾಗು ಹಾಲಿ ಆಯುಕ್ತರು, ಮುಡಾದ ಆಡಳಿತ ಮಂಡಳಿ ಸದಸ್ಯರು, ಮಾಜಿ ಸದಸ್ಯರು, ಕಾರ್ಯದರ್ಶಿ ಹಾಗು ಮಾಜಿ ಕಾರ್ಯದರ್ಶಿಗಳು, ವಿಶೇಷ ಭೂ ಸ್ವಾಧೀನ ಅಧಿಕಾರಿಗಳು
ನಗರ ಯೋಜಕ ಸಿಬ್ಬಂದಿಗಳು,ವಿಶೇಷ ತಹಶಿಲ್ದಾರ್ ಗಳು, ವಲಯಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಸೈಟ್ ಸೆಕ್ಷನ್ ಅಧಿಕಾರಿಗಳು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರು , ಡಿ ಗ್ರೂಪ್ ಸೇರಿ
ಮುಡಾದ ಎಲ್ಲಾ ಸಿಬ್ಬಂದಿಗಳು ಹಾಗು ಅವರ ಸಂಬಂಧಿಕರ ಫೋನ್ ನಂಬರ್ ಗಳನ್ನು ಸಂಗ್ರಹ ಮಾಡಲಾಗಿದ್ದು, ಇದರ ಜೊತೆಗೆ ಡೀಲರ್ ಗಳು, ಮಧ್ಯವರ್ತಿಗಳ ನಂಬರ್ ಕೂಡ ಸಂಗ್ರಹ ಮಾಡಿ 2020 ರಿಂದ 2023 ವರಗೆ ಯಾರ ಯಾರ ಸಂಪರ್ಕದಲ್ಲಿದ್ದರು ಎಂಬುದರ ತನಿಖೆಯನ್ನು ಇಡಿ ಅಧಿಕಾರಿಗಳು ನಡೆಸಿಲಿದ್ದಾರೆ.