ಬೆಂಗಳೂರು:ಲೋಕಸಭಾ ಚುನಾವಣೆಗೆ ಪುತ್ರಿನಿಗೆ ಹಾವೇರಿಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ತೊಡೆತಟ್ಟಿದ್ದು, ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಹೌದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ವಿರುದ್ಧ ಸ್ಪರ್ಧೆ ನಡೆಸಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಸ್ವಪಕ್ಷದ ನಾಯಕರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಕುಟುಂಬದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂದು ಪಣತೊಟ್ಟಿರುವ ಕೆ ಎಸ್ ಈಶ್ವರಪ್ಪ ಕಳೆದ ವಾರ ತಮ್ಮ ನಾಮಪತ್ರವನ್ನೂ ಸಲ್ಲಿಕೆ ಮಾಡಿದ್ದರು. ಅಲ್ಲದೇ ಕೆ ಎಸ್ ಈಶ್ವರಪ್ಪ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹಲವು ಬಿಜೆಪಿ ನಾಯಕರು ಮನವೊಲಿಸಿದ್ರು. ಆದರೂ ಸಹ ನಾಮಪತ್ರವನ್ನೂ ಸಲ್ಲಿಕೆ ಮಾಡಿರುವ ಕೆ ಎಸ್ ಈಶವರಪ್ಪ ಅವರಿಗೆ ಇದೀಗ ಬಿಜೆಪಿ ಡೆಡ್ ಲೈನ್ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಹಿರಿಯ ನಾಯಕರಾದ ಕೆ ಎಸ್ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬ್ರಹ್ಮನೇ ಬಂದು ಹೇಳಿದರೂ ನಾನು ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕುರುಬ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದು, ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.
ರಾಜ್ಯಕ್ಕೆ ಅಮಿತ್ ಶಾ ಬಂದ ಹೋದ ಬಳಿಕ ಈಶ್ವರಪ್ಪರಿಗೆ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಶ್ವರಪ್ಪರ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಬೇಸರದಿಂದ ಬಂದಿದ್ದ ಈಶ್ವರಪ್ಪ ನಂತರ ನಾನು ಶಿವಮೊಗ್ಗದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ರು, ಇದೀಗ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಗೊಂದಲದಲ್ಲಿದ್ದು, ಈಶ್ವರಪ್ಪ ಅವರನ್ನ ಮನವೊಲಿಸುವ ಹಲವು ತಂತ್ರಗಳು ವಿಫಲವಾಗಿದೆ.