ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದ ಜಾಲಿ ಬಾಸ್ಟಿನ್ (57) ಹೃದಯಾಘಾತದಿಂದ ಡಿಸೆಂಬರ್ 26 (ಮಂಗಳವಾರ) ನಿಧನರಾಗಿದ್ದಾರೆ.
ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಜಾಲಿ ಬಾಸ್ಟಿನ್ ಅವರನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿಸಿದರು ಎನ್ನಲಾಗಿದೆ. ‘ಪ್ರೇಮಲೋಕ’, ‘ಪುಟ್ನಂಜ’, ‘ಅಣ್ಣಯ್ಯ’, ‘ಶಾಂತಿ ಕ್ರಾಂತಿʼ ಸೇರಿದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಲವು ಸಿನಿಮಾಗಳಲ್ಲಿ ಇವರು ಕೆಲಸ ಮಾಡಿದ್ದರು.
ಸಾಹಸ ನಿರ್ದೇಶನ ಹಾಗೂ ಸಾಹಸ ಕಲಾವಿದನಾಗಿ ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಅವರು ‘ಮಾಸ್ಟರ್ ಪೀಸ್’, ʼʼಏಕಾಂಗಿʼ, ʼಸೂಪರ್ ರಂಗʼ, ʼಗಾಳಿಪಟʼ, ʼಪಾಪ್ ಕಾರ್ನ್ ಮಂಕಿ ಟೈಗರ್ʼ, ʼಬೆಂಗಳೂರು ಡೇಸ್ʼ, ʼಆಪರೇಷನ್ ಜೀವʼ, ‘ಅಂಗಮಲಿ ಡೈರೀಸ್’(ಮಲಯಾಳಂ), ʼಅಣ್ಣಯ್ಯʼ, ʼನಕ್ಷತ್ರಂ’(ತೆಲುಗು), ʼದಿ ಬಾಡಿ’(ಹಿಂದಿ), ‘ಇರಿದ’(ತಮಿಳು) ಸೇರಿದಂತೆ 900 ಕ್ಕೂ ಹೆಚ್ಚಿನ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದರು.ಜಾಲಿ ಬಾಸ್ಟಿನ್ ಅವರು 1966ರಲ್ಲಿ ಕೇರಳದಲ್ಲಿ ಜನಿಸಿದ್ದರು. ಅವರು ಬೆಳೆದದ್ದು ಬೆಂಗಳೂರಿನಲ್ಲಿ. ಹೀಗಾಗಿ, ಇಲ್ಲಿಯೇ ಶಿಕ್ಷಣವನ್ನು ಪಡೆದರು. ಆರಂಭದಲ್ಲಿ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಜಾಲಿ ಬಾಸ್ಟಿನ್ ಸಿನಿಮಾದಲ್ಲಿ ಬೈಕ್ ಸಾಹಸದ ದೃಶ್ಯಗಳನ್ನು ಮಾಡುತ್ತಿದ್ದರು. ರವಿಚಂದ್ರನ್ ಅವರ ʼಪ್ರೇಮ ಲೋಕʼ ಸಿನಿಮಾದಲ್ಲಿ ಡ್ಯೂಪ್ ಹಾಕಿದ್ದರು. ಈ ಸಮಯದಲ್ಲಿ ಅವರಿಗೆ 17 ವರ್ಷ ಆಗಿತ್ತು.‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿದ್ದರು. ಒಂದು ಕಾಲಕ್ಕೆ ಅತಿಹೆಚ್ಚು ಸಂಭಾವನೆ ಪಡೆಯೋ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಅವರಿಗೆ ಇತ್ತು. ಇತ್ತೀಚೆಗಷ್ಟೇ ಅವರು ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಸಿನಿಮಾಗಾಗಿ ಕೆಲಸ ಮಾಡಿದ್ದರು.