ತಮಿಳುನಾಡಿಗೆ ಕೆಆರ್ಎಸ್ನಿಂದ (KRS) 5000 ಕ್ಯೂಸೆಕ್ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ (Supreme Court) ಆದೇಶ ಹೊರಡಿಸಿದೆ. ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಕರ್ನಾಟಕ ರೈತರು ಆಕ್ರೋಶ ಹೊರಹಾಕುತ್ತಿದ್ದು, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ (BJP-JDS) ಕೋರ್ಟ್ನಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಆರಂಭಿಸಿವೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಿತ್ರ ಪಕ್ಷ ಡಿಎಂಕೆ ಜೊತೆ ಕಾಂಗ್ರೆಸ್ ಸರ್ಕಾರ ಮಾತನಾಡಬೇಕು. ಡಿಎಂಕೆ ಜೊತೆ ಚರ್ಚಿಸಿ ಕಾವೇರಿ ನದಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿ. ಕೇಂದ್ರ ಮಧ್ಯ ಪ್ರವೇಶ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ. ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ತಪ್ಪು ಮಾಡಿದೆ. ಕೋರ್ಟ್ ಮುಂದೆ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರ ಸರಿಯಾಗಿ ಹೋಮ್ ವರ್ಕ್ ಮಾಡದಿರುವುದು ಸಾಬೀತಾಗಿದೆ. ಇಂದಿನ ಸುಪ್ರೀಂಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು. ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ವಾಸ್ತವಿಕ ಪರಿಸ್ಥಿತಿ ವಿವರಿಸಬೇಕು ಎಂದರು.
ಪ್ರಾಧಿಕಾರದ ಆದೇಶಕ್ಕೆ ನಾವು ಮಧ್ಯ ಪ್ರವೇಶ ಮಾಡಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರಿಂದ ಸುಪ್ರೀಂ ಕೋರ್ಟ್ ಜಲಾಶಯಗಳ ವೀಕ್ಷಣೆಗೆ ಯಾರ ಸಮಿತಿಯನ್ನು ಬೇಕಾದರೂ ಕಳುಹಿಸಿ ಕೊಡಲಿ. ಇದನ್ನು ಸರ್ಕಾರ ಮೇಲ್ಮನವಿಯಲ್ಲಿ ಮನವಿ ಮಾಡಬೇಕು. ಡಿಎಂಕೆ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ಇದೆ, ಅದು ಕೂಡಾ ಒಂದು ಕಾರಣ. ಸರ್ಕಾರ ಮೊದಲಿನಿಂದಲು ಕಾವೇರಿ ವಿಚಾರದಲ್ಲಿ ತಪ್ಪು ಮಾಡಿಕೊಂಡು ಬಂದಿದೆ. ರಾಜ್ಯಕ್ಕೆ ಬಹಳ ಇಕ್ಕಟ್ಟಿನ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ ಎಂದರು.